ಹಿರಿಯ ಪೋಲಿಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದ ತಂಡ ರಚನೆ
ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಕುರಿತ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ರಾಜ್ಯ ಹೈಕೋರ್ಟ್ ಇಂದಿಲ್ಲಿ ಆದೇಶಿಸಿದೆ.
ಹಿರಿಯ ಪೋಲಿಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಅನುಭವಿ ಅಧಿಕಾರಿಗಳ ಪಟ್ಟಿಯನ್ನೂ ನ್ಯಾಯಾಲಯವೇ ರಚಿಸಿ, ತನಿಖೆ ನಡೆಸುವಂತೆ ಸೂಚಿಸಿದೆ.
100 ದಿನದಲ್ಲಿ ನ್ಯಾಯಾಲಯಕ್ಕೆ ವರದಿ
ತನಿಖಾ ವರದಿಯನ್ನು ನ್ಯಾಯಾಲಯಕ್ಕೆ 100 ದಿನದೊಳಗೆ ಸಲ್ಲಿಸಬೇಕು, ಅಲ್ಲದೆ, ಪ್ರತಿ 30 ದಿನಕ್ಕೆ ಒಮ್ಮೆ ತನಿಖಾ ಪ್ರಗತಿ ವರದಿ ನೀಡುವಂತೆ ಆದೇಶಿಸಿದೆ.
ಅಲ್ಲದೆ, ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆಗೆ ಸಂಪೂರ್ಣ ಸಹಕಾರ ಮತ್ತು ಅಗತ್ಯ ದಾಖಲೆ ಒದಗಿಸುವಂತೆ ಸೂಚಿಸಿದೆ.
ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ವಿಧಾನಸಭಾ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಆದೇಶವನ್ನು ಕಾಯ್ದಿರಿಸಿದ್ದರು.
ಸಿಬಿಐ ತನಿಖೆ ಬೇಡಿಕೆ ನಿರಾಕರಣೆ
ಕಾಯ್ದಿರಿಸಿದ ಆದೇಶವನ್ನು ಇಂದು ಪ್ರಕಟಿಸಿದ ನ್ಯಾಯಪೀಠ, ಸಿಬಿಐ ತನಿಖೆ ಬೇಡಿಕೆ ನಿರಾಕರಿಸಿ, ರಾಜ್ಯ ಪೋಲಿಸರಿಂದಲೇ ತನಿಖೆಗೆ ಆದೇಶಿಸಿದರು.
ಅಲೋಕ್ ಕುಮಾರ್ ನೇತೃತ್ವದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳಾದ ದಿವ್ಯ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೌಕ್ಸೆ, ಶಮ್ಮಾ ಮಿಶ್ರ ತಂಡದಲ್ಲಿದ್ದಾರೆ.
ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ, ಸಂಪೂರ್ಣ ದಾಖಲೆಗಳನ್ನು ತನಿಖಾ ತಂಡಕ್ಕೆ ಒಂದು ವಾರದಲ್ಲಿ ಹಸ್ತಾಂತರಿಸಬೇಕು.
ತನಿಖೆಯಲ್ಲಿ ಹಸ್ತಕ್ಷೇಪ ಬೇಡ
ರಾಜ್ಯ ಸರ್ಕಾರ ಎಸ್ಐಟಿಗೆ ಪೋಲಿಸ್ ಠಾಣೆ ಸ್ಥಾನಮಾನ ನೀಡಬೇಕು, ಈ ಸಂಬಂಧ ಶೀಘ್ರ ಆದೇಶ ಹೊರಡಿಸುವುದಲ್ಲದೆ, ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದೆ.
ಪಶು ವೈದಾಧಿಕಾರಿಗಳ ನೇಮಕಾತಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ಇ.ಡಿ. ತನಿಖೆಗೆ ಮುಂದಾಗಿತ್ತು.
ಇ.ಡಿ. ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತು, ಆಯೋಗದ ಹಿಂದಿನ ಕಾರ್ಯದರ್ಶಿ ಜ್ಞಾನೇಂದ್ರ ಕುಮಾರ್, ಹಗರಣದ ರೂವಾರಿ ಬಸವರಾಜ ಕನ್ನಾಳೆ ಅವರನ್ನು ವಶಕ್ಕೆ ಪಡೆದ ತಂಡ, ಮಹತ್ತರ ದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆ ಆರಂಭಿಸಿತ್ತು.
ಕೋಟ್ಯಂತರ ರೂ. ಕೈಬದಲಾವಣೆ
ಹಗರಣದಲ್ಲಿ ಕೋಟ್ಯಂತರ ರೂ. ಕೈಬದಲಾವಣೆ ಆಗಿರುವುದನ್ನು ಪ್ರಾಥಮಿಕ ತನಿಖೆಯಲ್ಲಿ ಸಿಐಡಿ ಪತ್ತೆ ಹಚ್ಚಿದ್ದನ್ನು ಸ್ಮರಿಸಬಹುದು.
ಈ ಸಂದರ್ಭದಲ್ಲೇ ಹಗರಣವನ್ನು ಸಿಬಿಐಗೆ ವಹಿಸುವಂತೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಂಜುನಾಥ್ ನ್ಯಾಯಾಲಯದ ಮೊರೆ ಹೋಗಿದ್ದರು.


