ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನಸ್ಸು ಮಾಡಿದರೆ ಆರ್ಥಿಕ ಇಲಾಖೆ ಸಹಕಾರ ಇಲ್ಲದೇ ರೈತರ ಕೃಷಿ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ರಾಜ್ಯದ ಹಿರಿಯ ರಾಜಕಾರಣಿ ಅಲ್ಲದೇ, ದೊಡ್ಡ ಉದ್ಯಮಿ, ಅವರು ಮನಸ್ಸು ಮಾಡಿದರೆ, ಸ್ವಂತ ಹಣದಲ್ಲೇ ಕೃಷಿ ಸಾಲ ಮನ್ನಾ ಮಾಡಬಹುದು ಎಂದರು.
ಕೇಂದ್ರದ ನೆರವು ಪಡೆಯಲಿಲ್ಲ
ನಾನಾಗಲೀ, ದೇವೇಗೌಡರಾಗಲೀ, ಯಡಿಯೂರಪ್ಪ ಆಗಲೀ ಮುಖ್ಯಮಂತ್ರಿ ಆಗಿದ್ದ ವೇಳೆ ಕೇಂದ್ರದ ನೆರವು ಪಡೆದು ಸಾಲ ಮನ್ನಾ ಮಾಡಲಿಲ್ಲ.
ರಾಜ್ಯದ ಸಂಪನ್ಮೂಲದಿಂದಲೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಡಳಿತದಲ್ಲಿ 25,000 ಕೋಟಿ ರೂ.ಗಳಿಗೂ ಹೆಚ್ಚು ಸಾಲ ಮನ್ನಾ ಮಾಡಿದೆ.
ಮುಂಗಾರು ವೈಫಲ್ಯದಿಂದ ಕೃಷಿಕರು ಬೀದಿಗೆ ಬಿದ್ದಿದ್ದಾರೆ, ಅವರ ನೆರವಿಗೆ ಬರಬೇಕಾದುದು ಸರ್ಕಾರದ ಕರ್ತವ್ಯ, ಮಾನ್ಯ ಮುಖ್ಯಮಂತ್ರಿ ಅವರು, ಪ್ರಧಾನಿ ನರೇಂದ್ರ ಮೋದಿ ಕಡೆ ಬೊಟ್ಟು ಮಾಡದೆ ಕೃಷಿ ಸಾಲ ಮನ್ನಾ ಮಾಡಲಿ.
20,000 ಕೋಟಿ ರೂ. ಇಲ್ಲವೇ
ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕ 50 ರಿಂದ 60,000 ಕೋಟಿ ರೂ. ವೆಚ್ಚ ಮಾಡುವ ನಿಮಗೆ, 15 ರಿಂದ 20,000 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ರೈತರನ್ನು ಉಳಿಸಲೇಬೇಕು ಎಂಬ ಗುರಿ ಇದ್ದಲ್ಲಿ, ಸರ್ಕಾರದ ಬೊಕ್ಕಸದಿಂದ ಕೊಡಿ, ಇಲ್ಲವೇ ನಿಮ್ಮ ಬೊಕ್ಕಸದಿಂದಲೇ ಕೊಡಿ ಎಂದರು.
ಬೆಂಗಳೂರಿನ ಹೊರವಲಯದಲ್ಲಿ ನೈಸ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಲು ಯೋಜನೆಗಳನ್ನು ರೂಪಿಸಲಾಗಿದೆ, ಮುಖ್ಯಮಂತ್ರಿ ತಮ್ಮ ಆಡಳಿತದಲ್ಲಿ ಮಹತ್ತರ ಬದಲಾವಣೆ ತರುವುದಾಗಿ ಹೇಳಿಕೊಳ್ಳುತ್ತಿದ್ದಾರೆ, ಬದಲಾವಣೆ ಎಂದರೆ ನೈಸ್ ವ್ಯವಹಾರವೇ ಎಂದು ಪ್ರಶ್ನಿಸಿದರು.
ಈ ಹಿಂದೆ ಒತ್ತಾಯ ಮಾಡುತ್ತಿದ್ದರು
ನಾವುಗಳು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಕೃಷಿ ಸಾಲ ಮನ್ನಾ ಮಾಡುವಂತೆ ಇದೇ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒತ್ತಾಯ ಮಾಡುತ್ತಿದ್ದರು.
ಅಂದು ನಾವು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಲಿಲ್ಲ, ಸಹಕಾರವನ್ನೂ ಕೇಳಲಿಲ್ಲ, ನಮ್ಮ ಸಂಪನ್ಮೂಲವನ್ನೇ ಕ್ರೋಡೀಕರಿಸಿ ರೈತರ ನೆರವಿಗೆ ಬಂದಿದ್ದೆವು.
ರೈತರು ಮತ್ತು ಬರಗಾಲದ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆದಿದ್ದಾರೆ, 100ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಘೋಷಣೆ ಮಾಡಿದರೂ, ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ.
ಸುಮ್ಮನೆ ಕಾಲ ಕಳೆಯುತ್ತಿದ್ದಾರೆ
ಮಳೆ ನಂಬಿಕೊಂಡು ರೈತರು ಎರಡು-ಮೂರು ಬಾರಿ ಬಿತ್ತನೆ ಮಾಡಿದರೂ ಬೆಳೆ ಮೊಳಕೆ ಒಡೆಯಲಿಲ್ಲ, ಕೃಷಿಕರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ, ತಕ್ಷಣ ಅವರ ನೆರವಿಗೆ ಬರುವುದು ಬಿಟ್ಟು, ವಿಧಾನಮಂಡಲದ ಅಧಿವೇಶನ, ಕೇಂದ್ರಕ್ಕೆ ನಿಯೋಗ ಎಂಬುದಾಗಿ ಹೇಳಿಕೊಂಡೇ ಕಾಲ ಕಳೆಯುತ್ತಿದ್ದಾರೆ ಎಂದರು.
ಈ ಸರ್ಕಾರ ’ಎಲ್ಲೋ ಜೋಗಪ್ಪ ನಿನ್ನರಮನೆ’ ಎಂಬ ಹಾಡಿನಂತಾಗಿದೆ ಎಂದು ಲೇವಡಿ ಮಾಡಿದರು.
ಶಿವಕುಮಾರ್ ಆಡಳಿತದಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ, ಆದರೆ, ಅವರು ಮಾತ್ರ ಬೆಳಗಿನಿಂದ ಸಂಜೆವರೆಗೂ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ ಎಂದರು.


