ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಗರದ ಹೊರವಲಯದ ನೆಲಮಂಗಲ ಸಮೀಪ ರೆಸಾರ್ಟ್ ಒಂದರಲ್ಲಿ ಸಚಿವ ಸತೀಶ್ ಕಳೆದ ಶನಿವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.
ರಾಜಕೀಯ ವಿದ್ಯಮಾನ
ಸತೀಶ್ ಜೊತೆ ಮತ್ತೊಬ್ಬ ಕಾಂಗ್ರೆಸ್ ಹಿರಿಯ ಮುಖಂಡರು ಉಪಸ್ಥಿತರಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ನೆಲಮಂಗಲದ ವಿವಿಧೆಡೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ಪ್ರವಾಸ ಕೈಗೊಂಡಿದ್ದರು, ಈ ಸಂದರ್ಭದಲ್ಲೇ ಅವರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಗೊಂದಲ ವೇಳೆಯೂ ಕುಮಾರಸ್ವಾಮಿ ಅವರನ್ನು ಸತೀಶ್ ದೆಹಲಿಯಲ್ಲಿ ಎರಡು ಬಾರಿ ಭೇಟಿ ಮಾಡಿದ್ದರು.
ಇ.ಡಿ. ದಾಳಿ
ದಕ್ಷಿಣ ಆಫ್ರಿಕಾದ ವಿವಿಧ ದೇಶಗಳಲ್ಲಿ ಸತೀಶ್ ಕುಟುಂಬ ಬಂಡವಾಳ ಹೂಡಿದ್ದಾರೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಇವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದೊಡ್ಡ ಪ್ರಮಾಣದಲ್ಲಿ ದಾಖಲೆ ಮತ್ತು ನಗದನ್ನು ವಶ ಪಡಿಸಿಕೊಂಡಿತ್ತು.
ದಾಳಿ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಎಂಬ ಅನುಮಾನ ಜಾರಕಿಹೊಳಿ ಕುಟುಂಬಕ್ಕಿದೆ.
ಇ.ಡಿ. ದಾಳಿ ಬೆನ್ನಲ್ಲೇ ಕುಮಾರಸ್ವಾಮಿ ಭೇಟಿ, ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಎಡೆ ಮಾಡಿದೆ.
ಸ್ಪಷ್ಟ ಮಾಹಿತಿ ಇಲ್ಲ
ಈ ಭೇಟಿ ಅನೌಪಚಾರಿಕವೂ ಅಥವಾ ರಾಜಕೀಯ ಕಾರಣಕ್ಕೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಕುಮಾರಸ್ವಾಮಿ ಭೇಟಿ ನಂತರ ಜಾರಕಿಹೊಳಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ತಮ್ಮ ಸರ್ಕಾರಿ ನಿವಾಸದಲ್ಲಿ ಸಮುದಾಯದ ಶಾಸಕರು ಮತ್ತು ಮುಖಂಡರ ನಿರಂತರ ಸಭೆ ನಡೆಸಿದರು.


