ಬೆಂಗಳೂರು:ನೈಸ್ (ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್) ಯೋಜನೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಲೂಟಿ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಗೆ ಸಂಬಂಧಿಸಿದಂತೆ ಕೆಲವು ಮಹತ್ತರ ದಾಖಲೆಗಳನ್ನು ಬಹಿರಂಗಪಡಿಸಿ ಈ ಕುರಿತು ನ್ಯಾಯಾಲಯಗಳೇ ತನಿಖೆ ನಡೆಸಬೇಕು ಎಂದರು.
ದೊಡ್ಡ ಹಗರಣ
ನೈಸ್ ಯೋಜನೆಯು 2-ಜಿ, ಕಲ್ಲಿದ್ದಲು ಹಗರಣಗಳಿಗಿಂತಲೂ ದೊಡ್ಡ ಹಗರಣ ಎಂದು ಕುಮಾರಸ್ವಾಮಿ ಟೀಕಿಸಿದರು.
ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳನ್ನು ಬದಿಗಿರಿಸಿ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಮುಖ್ಯಸ್ಥ ಅಶೋಕ್ ಖೇಣಿ ಜೊತೆಗೂಡಿ ಶಿವಕುಮಾರ್ ಭಾರೀ ಅವ್ಯವಹಾರ ನಡೆಸಿದ್ದಾರೆ.
ಸರ್ಕಾರಿ ಭೂಮಿಯನ್ನು ತಮ್ಮ ಸಹೋದರ ಡಿ.ಕೆ.ಸುರೇಶ್ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಖರೀದಿಸಿ ಭೂವ್ಯವಹಾರ ಮಾಡಿದ್ದಾರೆ.
ಅಧಿಕಾರ ಕೊಟ್ಟವರು ಯಾರು
ಇವರ ಎಲ್ಲಾ ಯೋಜನೆಗಳಿಗೆ ನೈಸ್ ಕಂಪನಿ ನಿರಾಕ್ಷೇಪಣಾ ಪತ್ರ ನೀಡಿದೆ, ಇದನ್ನು ನೀಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ನೈಸ್ ಯೋಜನೆ ಸರಹದ್ದಿನಲ್ಲಿ 15 ಕೆರೆ, ಸ್ಮಶಾಣ ಸೇರಿದಂತೆ 300 ರಿಂದ 400 ಎಕರೆ ಸರ್ಕಾರಿ ಭೂಮಿ ಲಪಟಾಯಿಸಿದ್ದಾರೆ.
ಬೆಂಗಳೂರು ನಗರದ ಸರಹದ್ದಿನಲ್ಲೇ ಸುರೇಶ್ ಮತ್ತವರ ಕುಟುಂಬ 10 ಎಕರೆ ಭೂಮಿ ಖರೀದಿಸಿ ಶೋಭಾ ಡೆವಲಪರ್ಸ್ ಜೊತೆಗೂಡಿ ಬಹುಮಹಡಿ ವಸತಿ ಸಮುಚ್ಚಯಗಳನ್ನು ನಿರ್ಮಿಸಿದ್ದಾರೆ.
ಸರ್ಕಾರಿ ಜಾಗ ಖರೀದಿ
ಅಮಾಸೆಗೌಡ ಎಂಬ ಹೆಸರಿನಲ್ಲಿ ಸರಕಾರದ ಜಾಗವನ್ನು ಹೇಗೆ ಖರೀದಿ ಮಾಡಿದಿರಿ ಎಂದು ಪ್ರಶ್ನಿಸಿದರು.
ಎಸ್.ಎಂ.ಕೃಷ್ಣ ಆಡಳಿತದಲ್ಲಿ ನೈಸ್‌ನ ಮೂಲ ಫ್ರೇಮ್ ವರ್ಕ್ ಒಪ್ಪಂದವನ್ನೇ ಬದಲಾಯಿಸಿ ಕೋಟ್ಯಂತರ ರೂ. ಮೌಲ್ಯದ ಸರಕಾರಿ ಭೂಮಿ ನುಂಗಿದ್ದಾರೆ.
ನೈಸ್ ಫ್ರೇಂ ವರ್ಕ್ ಬದಲಾವಣೆ ಮಾಡಿದ್ದರಿಂದ 2003ರಲ್ಲಿ 4 ಕೋಟಿ ರೂ. ಇದ್ದ ಆಸ್ತಿ ಬೆಲೆ 2023ರಲ್ಲಿ 1413 ಕೋಟಿ ರೂ.ಗೆ ಹೆಚ್ಚಳವಾಯಿತು, ಇದಕ್ಕೆಲ್ಲಾ ಎ.ಕೆ.-ಡಿ.ಕೆ. ಅವರುಗಳ ಕರಾಮತ್ತು ಎಂದು ಲೇವಡಿ ಮಾಡಿದರು.
ನಕ್ಷೆ ಬದಲಾವಣೆ
ಮೂಲ ನಕ್ಷೆ ಬದಲಾವಣೆಗೆ ಸಂಪುಟದಲ್ಲೂ ತೀರ್ಮಾನ ಕೈಗೊಂಡಿಲ್ಲ, ಅಂದು ಸಚಿವರಾಗಿ ತಮ್ಮ ಇಚ್ಛೆಗೆ ತಕ್ಕಂತೆ ನ್ಯಾಯಾಲಯಗಳ ಆದೇಶವನ್ನೂ ಧಿಕ್ಕರಿಸಿ ರೈತರ ಮತ್ತು ಸರಕಾರಿ ಭೂಮಿಯನ್ನು ಲಪಟಾಯಿಸಿದ್ದಾರೆ ಎಂದು ಕೆಲವು ಮಹತ್ತರ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ರಸ್ತೆ, ಟೌನ್‌ಶಿಪ್ ಯೋಜನೆಗಳ ಹೆಸರಿನಲ್ಲಿ ರೈತರ ಜೀವನದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ ಹಾಗೂ ಗುಲಾಮಗಿರಿಯಲ್ಲಿ ಕೆಲಸ ಮಾಡುತ್ತಿದೆ.
ಈ ಯೋಜನೆ ದೇವೇಗೌಡರ ಕೂಸು ಎಂದು ದೂಷಿಸುತ್ತಿರುವ ಮುಖ್ಯಮಂತ್ರಿಗೆ ಸವಾಲೆಲು ಹಾಕಿರುವ ಅವರು, 1995 ರಿಂದ ನೈಸ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ತೀರ್ಮಾನಗಳ ಸಂಪೂರ್ಣ ದಾಖಲೆಗಳು ನನ್ನ ಬಳಿಯಿದ್ದು, ಸರ್ಕಾರಕ್ಕೆ ಬದ್ಧತೆ ಇದ್ದರೆ ವಿಧಾನಸೌಧದ ಮೆಟ್ಟಿಲುಗಳ ಮೇಲೆಯೇ ಚರ್ಚೆ ಮಾಡಲು ನಾನು ಸಿದ್ಧ ಎಂದರು.

ಕಾಂಗ್ರೆಸ್ ಪ್ರೆಸೆಂಟೇಷನ್
ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ಯುವಕರೊಂದಿಗೆ ಸಂವಾದದಲ್ಲಿ, ಕೇಂದ್ರ ಸರ್ಕಾರ ಮತ್ತು ಸಂವಿಧಾನ ಸಂಸ್ಥೆಗಳ ಬಗ್ಗೆ ಪ್ರೆಸೆಂಟೇಷನ್ ನೀಡುತ್ತಾರೆ, ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ನೈಸ್ ಅಕ್ರಮ 2-ಜಿ ಮತ್ತು ಹಗರಣಕ್ಕಿಂತಲೂ ಬಹುದೊಡ್ಡ ಹಗರಣವಾಗಿದೆ.
ಈ ವಿಚಾರವಾಗಿ ಹೈಕೋರ್ಟ್ ಸಹ ಕೆಲವು ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸರ್ಕಾರ ತಪ್ಪು ಹೆಜ್ಜೆ ಇಡುತ್ತಿದೆ ಹಾಗೂ ಹಗರಣಕ್ಕೆ ಬೆಂಬಲ ನೀಡುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದೆ ಎಂದರು.
ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ದೇವೇಗೌಡರ ಅವಧಿಯಲ್ಲಿ ಆರಂಭವಾಗಿದ್ದು ನಿಜವಾದರೂ, ಆಗ ನೈಸ್ ಕಂಪನಿ ಇರಲಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಒಪ್ಪಂದಕ್ಕೆ ಮಾತ್ರ ದೇವೇಗೌಡರ ಸಹಿ
ಫೆಬ್ರವರಿ 20, 1995ರಲ್ಲಿ ವಿಹೆಚ್‌ಬಿ, ಕಲ್ಯಾಣಿ ಗ್ರೂಪ್ ಹಾಗೂ ಸ್ಲಾಬ್ ಇಂಜಿನಿಯರಿಂಗ್ ಕಂಪನಿಗಳು ಸೇರಿ ಮಾಡಿಕೊಂಡಿದ್ದ ಒಪ್ಪಂದಕ್ಕೆ ಮಾತ್ರ ದೇವೇಗೌಡರು ಸಹಿ ಹಾಕಿದ್ದರು.
ನಂತರ ಕಂಪನಿಯು ಡಿಪಿಆರ್ ಮತ್ತು ಲಾಭ-ನಷ್ಟದ ವರದಿ ನೀಡಿದ ಬಳಿಕ, ನವೆಂಬರ್ 8, 1995 ರಂದು ದೇವೇಗೌಡರ ಸಂಪುಟ ಕೇವಲ 5 ಟೌನ್‌ಶಿಪ್‌ಗಳ ಅನುಷ್ಠಾನಕ್ಕೆ ಮಾತ್ರ ಅನುಮೋದನೆ ನೀಡಿತ್ತು.
ಅಂದು ರೈತರ ಫಲವತ್ತಾದ ಕೃಷಿ ಭೂಮಿ ಹೊರತುಪಡಿಸಿ, ಕೇವಲ ಒಣಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿತ್ತು.
ಖರ್ಚು-ವೆಚ್ಚ ಕಂಪನಿಯದು
30 ವರ್ಷಗಳ ನಿರ್ವಹಣೆ, ಟೋಲ್ ಸಂಗ್ರಹಣೆ ಹಾಗೂ ಭೂಸ್ವಾಧೀನದ ಖರ್ಚು-ವೆಚ್ಚ ಕಂಪನಿಯೇ ಭರಿಸಬೇಕೆಂಬ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಅಂದಿನ ಯೋಜನೆಗೆ ಅನುಮತಿ ನೀಡಲಾಗಿತ್ತು.
ಆ ಬಳಿಕ 1997 ರಲ್ಲಿ ಜೆ.ಹೆಚ್.ಪಟೇಲ್ ಸರ್ಕಾರದ ಅವಧಿಯಲ್ಲಿ ‘ಭಾರತ್ ಫೋರ್ಜ್ ಲಿಮಿಟೆಡ್’ಗೆ ಯೋಜನೆ ಹಸ್ತಾಂತರವಾಯಿತು, ಅಲ್ಲಿಯವರೆಗೂ ನೈಸ್ ಕಂಪನಿ ಚಿತ್ರಣದಲ್ಲೇ ಇರಲಿಲ್ಲ, ರಾಜ್ಯ ಸರ್ಕಾರದ ವಿರುದ್ಧ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು.
ಯೋಜನೆಗಾಗಿ ಉತ್ತಮ ಕೃಷಿ ಭೂಮಿ ಗುರುತಿಸದೆ, ಬರಡು ಭೂಮಿ ಬಳಸಬೇಕೆಂಬ ನಿಯಮವಿತ್ತು, ರಸ್ತೆ ಕಾಮಗಾರಿಗೆ 6,999 ಎಕರೆ ಭೂಮಿಗೆ ಬದ್ಧತೆ ಮಾಡಲಾಗಿತ್ತು, ಫ್ರೇಮ್‌ವರ್ಕ್ ಒಪ್ಪಂದ ಮಾಡಿಕೊಂಡು ಯಾವುದೇ ನಿಯಮ ಉಲ್ಲಂಘಿಸಬಾರದು ಹಾಗೂ ಕೆರೆಗಳನ್ನು ಮುಟ್ಟಬಾರದು ಎಂಬ ಷರತ್ತುಗಳಿದ್ದವು.
ಸಿದ್ದಗಂಗಾ ಮಠಕ್ಕೆ ಸೇರಿದ ಭೂಮಿ
ಸಿದ್ದಗಂಗಾ ಮಠಕ್ಕೆ ಸೇರಿದ ಭೂಮಿ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಮಠಕ್ಕೆ ಸೇರಿದ ಭೂಮಿಯನ್ನು ಯೋಜನೆಗಾಗಿ ಪಡೆದುಕೊಳ್ಳಲಾಗಿತ್ತು, ರಸ್ತೆಗಾಗಿ ಬಳಕೆಯಾದ ಭೂಮಿ ಹೊರತುಪಡಿಸಿ ಉಳಿದ ಭೂಮಿ ವಾಪಸ್ ನೀಡುವಂತೆ ಮಠದ ಸ್ವಾಮೀಜಿಗಳು ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿ, ಈ ಕುರಿತ ಆಡಿಯೋ ಬಿಡುಗಡೆ ಮಾಡಿದರು.
ನೈಸ್ ಯೋಜನೆಗೆ ಅಧಿಸೂಚನೆಯಾಗಿದ್ದ ಭೂಮಿಗೆ ಸಂಬಂಧಿಸಿದಂತೆ ಇಂತಹ ಅನುಮತಿಗಳು ಹೇಗೆ ದೊರಕಿದವು.
ನೈಸ್ ಯೋಜನೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಂಡಿರುವುದನ್ನು ಪ್ರಸಂಶಿಸಿದ ಕುಮಾರಸ್ವಾಮಿ, 2018ರಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು, ನೈಸ್ ಸಂಸ್ಥೆ ವಿರುದ್ಧ ಸದನ ಸಮಿತಿ ನೀಡಿದ್ದ ವರದಿಯಲ್ಲಿ ನಿಯಮ ಉಲ್ಲಂಘನೆಗಳ ಬಗ್ಗೆ ಉಲ್ಲೇಖಿಸಲಾಗಿತ್ತು ಎಂದರು.
ರೈತರಿಗೆ ಅನ್ಯಾಯ
ಯೋಜನೆಯಡಿ ರೈತರ ಭೂಮಿ ಪಡೆದುಕೊಂಡು ಕಾಮಗಾರಿ ಪೂರ್ಣಗೊಳಿಸದೆ ರೈತರಿಗೆ ಅನ್ಯಾಯವಾಗಿದೆ, ಯೋಜನೆಯಡಿ 101 ಕಿಲೋಮೀಟರ್ ರಸ್ತೆ ನಿರ್ಮಿಸಬೇಕಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.
ಕೆಲವು ಕಿಲೋಮೀಟರ್ ರಸ್ತೆ ಮಾತ್ರ ನಿರ್ಮಿಸಲಾಗಿದೆ, ರೈತರ ಭೂಮಿ ಪಡೆದುಕೊಂಡು ಯೋಜನೆ ವಿಳಂಬ ಮಾಡಲಾಗುತ್ತಿದೆ.
ನೈಸ್ ಯೋಜನೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರ ಭೂಮಿ ಉಳಿಸಬೇಕು, ರಾಜ್ಯದ ಸಂಪತ್ತನ್ನು ಯಾರೇ ಲೂಟಿ ಮಾಡಿದರೂ ಅದರ ವಿರುದ್ಧ ಧ್ವನಿ ಎತ್ತುವುದಾಗಿ ಹೇಳಿದರು.


