ಬೆಂಗಳೂರು:ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ಗಳಿಗೆ ಬರುವ ಜನವರಿಯಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ನವೆಂಬರ್ ಕೊನೆಗೆ ಇಲ್ಲವೇ ಡಿಸೆಂಬರ್ನಲ್ಲಿ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ.
ನ್ಯಾಯಾಲಯದ ಆದೇಶ
ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ರಾಜ್ಯ ಸರ್ಕಾರ 4 ವರ್ಷಗಳ ನಂತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮುಂದಾಗಿದೆ.
ತಳಹಂತದಲ್ಲಿ ಜನರಿಗೆ ಅಧಿಕಾರ ನೀಡುವ ಈ ಚುನಾಚವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಾರ್ಡ್ ಪುನರ್ ವಿಂಗಡಣೆ ಮತ್ತು ಕ್ಷೇತ್ರಗಳ ಮೀಸಲಾತಿ ಸಂಬಂಧ ಪಕ್ಷದ ವೇದಿಕೆಯಲ್ಲೇ ಹಲವು ಸುತ್ತಿನ ಸಭೆ ನಡೆಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪೂರ್ಣಗೊಳ್ಳುತ್ತಿದ್ದಂತೆ ಚುನಾವಣೆಗೆ ಸಿದ್ಧವಾಗುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ತಿಳಿಸಿದೆ.
ಶಾಸಕಾಂಗ ಸಭೆಯಲ್ಲಿ ಸೂಚನೆ
ರೈತರ ಸಮಸ್ಯೆ ಕುರಿತು ಚರ್ಚಿಸುವ ಉದ್ದೇಶದಿಂದ ಕರೆಯಲಾಗಿದ್ದ ವಿಧಾನಮಂಡಲದ ಅಧಿವೇಶನ ವೇಳೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ಗಳಿಗೆ ಶೀಘ್ರ ಚುನಾವಣೆ ನಡೆಸಲಾಗುವುದು ಎಂದಿದ್ದರು.
ಚುನಾವಣೆಗೆ ಸಿದ್ಧರಾಗಿ ಎಂದು ಪಕ್ಷದ ಶಾಸಕರಿಗೆ ಮುಖ್ಯಮಂತ್ರಿ ಸಭೆಯಲ್ಲಿ ತಿಳಿಸಿದ್ದಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಲಿದ್ದು, ಶಾಸಕರು ಕ್ಷೇತ್ರದಲ್ಲೇ ಉಳಿದು ಅಧಿಸೂಚನೆ ಹೊರಡುವುದಕ್ಕೂ ಮುನ್ನ ಮೀಸಲಾತಿ ಮತ್ತು ಕ್ಷೇತ್ರ ವಿಂಗಡನೆ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಿ ಎಂದಿದ್ದರು.
ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾಡಳಿತಗಳಿಂದ ಕ್ಷೇತ್ರಗಳ ಮೀಸಲಾತಿ ಹಾಗೂ ಪುನರ್ ವಿಂಗಡಣೆ ಮಾಹಿತಿ ಬರುತ್ತಿದ್ದಂತೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಲಿದೆ.
ಅಧಿಕಾರ ಹಿಡಿಯುವ ಕಾರ್ಯತಂತ್ರ
ಕೆಳಸ್ಥರದ ಚುನಾವಣೆಯಲ್ಲಿ ಅಧಿಕಾರ ಹಿಡಿದು ವಿಧಾನಸಭಾ ಚುನಾವಣೆಗೆ ಪೀಠಿಕೆ ಸಿದ್ಧಪಡಿಸುವುದು ಮುಖ್ಯಮಂತ್ರಿ ಅವರ ಕಾರ್ಯತಂತ್ರವಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಡಿತ ಸಾಧಿಸುವ ಉದ್ದೇಶದಿಂದ ಪಕ್ಷದ ಶಾಸಕರು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದಲೇ ತಲಾ 50 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ.


