ಬೆಂಗಳೂರು:ನಗರದ ಹೊಸಕೆರೆಹಳ್ಳಿ ಟೋಲ್ ಬಳಿ ನಿರ್ಮಾಣವಾಗಿರುವ ಶೋಭಾ ಅಪಾರ್ಟ್ಮೆಂಟ್ ನಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬ ಅಕ್ರಮವಾಗಿ 2,000 ಕೋಟಿ ರೂ. ಸಂಪಾದನೆ ಮಾಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗುರುತರ ಆರೋಪ ಮಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಶೋಭಾ ಅಪಾರ್ಟ್ಮೆಂಟ್ ಯಾರ ಮಾಲೀಕತ್ವದಲ್ಲಿದೆ, ಈ ಕಟ್ಟಡಕ್ಕೂ ಮುಖ್ಯಮಂತ್ರಿ ಅವರ ಕುಟುಂಬ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಭೂಮಿ ಖರಿಸಿದ್ದು ಹೇಗೆ
ಅಮಾಸೆಗೌಡ, ಭಾಗ್ಯಲಕ್ಷ್ಮಿ, ಕೆಂಪೇಗೌಡ ಯಾರು, ಮುಖ್ಯಮಂತ್ರಿ ತಮ್ಮ ಮತ್ತು ತಾಯಿ ಹೆಸರಿಗೆ ಈ ಭೂಮಿ ಖರಿಸಿದ್ದು ಹೇಗೆ, ಸರ್ಕಾರಿ ಯೋಜನೆಗೆ ನೋಟಿಫೈ ಆದ ಭೂಮಿ ಖರೀದಿಸಲು ಹೇಗೆ ಸಾಧ್ಯವಾಯಿತು.
ಈ ಜಾಗಕ್ಕೆ ಎನ್ಓಸಿ ಹೇಗೆ ಸಿಕ್ಕಿತು, ಅಲ್ಲಿ ಕಟ್ಟಲಾಗಿರುವ ಗಗನಚುಂಬಿ ಅಪಾರ್ಟ್ಮೆಂಟ್ ನಿಂದ 2000 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದನೆ ಮಡಲಾಗಿದೆ.
ಇದಲ್ಲದೆ, ನೈಸ್ ರಸ್ತೆ ಅಕ್ಕಪಕ್ಕದಲ್ಲಿ ಸ್ವಾಧೀನ ಪಡಿಸಿಕೊಂಡ ಯಾವದೇ ಭೂಮಿಯ ಬಡ ರೈತರಿಗೆ ಕಂಪನಿ ಗುತ್ತಿಗೆದಾರ ಎನ್ಓಸಿ ಕೊಟ್ಟಿಲ್ಲ, ಇಷ್ಟೇ ಅಲ್ಲ, ಸಿದ್ದಗಂಗಾ ಮಠದ ಭೂಮಿಗೂ ಎನ್ಓಸಿ ನಿರಾಕರಿಸಲಾಗಿದೆ.
ಬೆದರಿಸಿ ಭೂಮಿ ಕಿತ್ತುಕೊಂಡಿದ್ದಾರೆ
ಆದರೆ, ನೈಸ್ ರಸ್ತೆ ಸುತ್ತಮುತ್ತ 200 ರಿಂದ 300 ಎಕರೆ ಭೂಮಿಯನ್ನು ಮುಖ್ಯಮಂತ್ರಿ ಮತ್ತವರ ಪರಿವಾರ ಖರೀದಿಸಿದ್ದು ಹೇಗೆ, ಅಕ್ರಮವಾಗಿ ಕಸಿದುಕೊಳ್ಳಲಾಗಿದೆ, ಹೆದರಿಸಿ, ಬೆದರಿಸಿ ಭೂಮಿ ಕಿತ್ತುಕೊಂಡಿದ್ದಾರೆ ಎಂಬ ಗುರುತರ ಆರೋಪ ಮಾಡಿದ್ದಾರೆ.
ಮಿತಿ ಮೀರಿದ ದುರಾಸೆ, ಅಂಕೆ ಇಲ್ಲದ ಭೂದಾಹ, ದೇವರು ಕೊಟ್ಟಿದ್ದು ಸಾಲದು, ಇನ್ನೂ ಬೇಕು ಬೇಕು ಎನ್ನುವ ಹಪಾಹಪಿ, ಮನುಷ್ಯನನ್ನು ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಲು ಪ್ರೇರೇಪಿಸುತ್ತದೆ.
ಭೂದಾಹಕ್ಕೆ ನೈಸ್ ಯೋಜನೆ ಸ್ವಾಹಾ
ಇವರ ಭೂದಾಹಕ್ಕೆ ಈಗ ಇಡೀ ನೈಸ್ ರಸ್ತೆ ಯೋಜನೆಯೇ ಸ್ವಾಹಾ ಆಗುವ ಅಪಾಯ ಎದುರಾಗಿದೆ, ಮಹಾಭಾರತದಲ್ಲಿ ಶಿಶುಪಾಲನಿಗೆ ನೂರೊಂದು ತಪ್ಪುಗಳನ್ನು ಮಾಡುವವರೆಗೆ ಶ್ರೀಕೃಷ್ಣ ಪರಮಾತ್ಮ ಅವಕಾಶ ಕೊಟ್ಟಂತೆ, ರಾಜ್ಯದ ಜನರೂ ಮುಖ್ಯಮಂತ್ರಿ ತಪ್ಪುಗಳನ್ನು ಗಮನಿಸುತ್ತಿದ್ದು, ಕೊನೆಯ ಅವಕಾಶ ನೀಡಿದ್ದಾರೆ.
ಹೈದರಾಬಾದ್ ಉದ್ಯಮಿ ಜೊತೆ ಶಾಮೀಲಾಗಿ ಇಡೀ ಯೋಜೆನೆಯನ್ನೇ ಖರೀದಿಸಲು ಹೊರಟಿದ್ದಾರೆ, ಮುಂದಿನ ವರ್ಷಕ್ಕೆ ನೈಸ್ ಒಪ್ಪಂದ ಮುಗಿಯುತ್ತದೆ, ಅದಕ್ಕೂ ಮೊದಲೇ ಸಂಪೂರ್ಣ ಆಸ್ತಿ ನುಂಗಿಬಿಡುವ ದುಸ್ಸಾಹಸಕ್ಕೆ ಮುಖ್ಯಮಂತ್ರಿ ಕೈ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.


