ಬೆಂಗಳೂರು:ಪೌರಾಡಳಿತ ಸಚಿವ ಹೆಚ್.ಸಿ.ಬಾಲಕೃಷ್ಣ ಬೆಂಗಳೂರು ಹೊರವಲಯದ ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ 36 ಎಕರೆ ಸರ್ಕಾರಿ ಭೂಮಿ ಕಬಳಿಸಿದ್ದಾರೆ ಎಂದು ಜೆಡಿಎಸ್ ಇಂದಿಲ್ಲಿ ಆರೋಪಿಸಿದೆ.
ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿ ವಿಚಾರಣೆಗೆ ಅನುಮತಿ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದೆ.
ರಾಜಕೀಯ ಪ್ರಭಾವ ಬಳಕೆ
ಸಚಿವರ ಭೂಕಬಳಿಕೆ ಬಗ್ಗೆ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಮಾಗಡಿಯ ಮಾಜಿ ಶಾಸಕ ಎ.ಮಂಜುನಾಥ್, ಬಡವರಿಗೆ ಹಂಚಿಕೆ ಆಗಬೇಕಿದ್ದ ಸರಕಾರಿ ಭೂಮಿಯನ್ನು ರಾಜಕೀಯ ಪ್ರಭಾವ ಬಳಸಿ ಬಾಲಕೃಷ್ಣ ತಮ್ಮ ಪತ್ನಿ ರಮಾ ಬಾಲಕೃಷ್ಣ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದರು.
ಕೇವಲ 15 ದಿನಗಳ ಹಿಂದೆ ಭೂಮಿಯನ್ನು ಇನ್ನೊಬ್ಬರ ಹೆಸರಿಗೆ ಮಾಡಿದ್ದು, ನಾಚಿಕೆ ಇಲ್ಲದ ಈ ವ್ಯಕ್ತಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ನಾಲಿಗೆ ಹರಿಯಬಿಡುತ್ತಿದ್ದಾರೆ ಎಂದರು.
ಸರ್ಕಾರಿ ಭೂಮಿ ಯಾರಿಗೂ ಗ್ರಾಂಟ್ ಮಾಡಲು ಆಗುವುದಿಲ್ಲ ಎಂಬುದಾಗಿ ಬಿಬಿಎಂಪಿ ರೈತರಿಗೆ ಕಾರಣ ಕೊಡುತ್ತದೆ, ಆದರೆ, ಬಾಲಕೃಷ್ಣ ಅವರಿಗೆ ಭೂಮಿ ಹೇಗೆ ಸಿಗುತ್ತದೆ, ಅವರ ಪತ್ನಿ ಹೆಸರಿಗೆ ಹೇಗೆ ಬರುತ್ತದೆ.
ಬಾಲಕೃಷ್ಣ ಅವರಿಗೆ ತಿರುಗೇಟು
ಕುಮಾರಸ್ವಾಮಿ ಗೆಣಸು ಕೆತ್ತುತಾ ಇದ್ದರಾ ಎಂದು ಕೇಳುವ ಬಾಲಕೃಷ್ಣ, ನೀವು ಇಲ್ಲೇನು ಕೆತ್ತಿರುವುದು, ಸ್ವಲ್ಪ ಹೇಳಿ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರನ್ನು 3ಬಿ ಎನ್ನುವ ನೀವು ದಾಖಲೆಗಳನ್ನು ಕೆತ್ತುತಾ, ಬಡವ ಹತ್ತು ಗುಂಟೆ ಗ್ರ್ಯಾಂಟ್ ಮಾಡಿಸಿಕೊಳ್ಳಲು ಅರ್ಜಿ ಹಾಕಿದರೆ ಕಾರಣ ಕೊಡುತ್ತೀರಿ, ಲೂಟಿ ಮಾಡುವವರಿಗೆ ಹೇಗೆ ಜಮೀನು ಮಾಡಿಕೊಡುತ್ತೀರಿ.
ತಾವರೆಕೆರೆಯ ಕುರುಬಹಳ್ಳಿ ಬಳಿ ಸರ್ವೆ 158ರಲ್ಲಿರುವ 36 ಎಕರೆ ಭೂಮಿಯಲ್ಲಿ ತಮ್ಮ ಹೆಂಡತಿ ಹೆಸರಿಗೆ 10 ಎಕರೆ ಮಾಡಿಸಿಕೊಂಡಿದ್ದು, ಉಳಿದ 26 ಎಕರೆಯನ್ನು ಅವರ ಜೊತೆಗಿರುವ ನಟರಾಜ ನಾಯ್ಡು ಎನ್ನುವವರ ಹೆಸರಿಗೆ ಮಾಡಿಸಿದ್ದಾರೆ.
ಸುಳ್ಳು ದಾಖಲಾತಿ ಸೃಷ್ಟಿ
ಸರ್ಕಾರಿ ಜಮೀನಿಗೆ ಸುಳ್ಳು ದಾಖಲಾತಿ ಸೃಷ್ಟಿಸಿ, ಉಳುಮೆ ಚೀಟಿಯಿಂದ ಎಲ್ಲಾ ದಾಖಲಾತಿ ಸೃಷ್ಟಿ ಮಾಡಿದ್ದಾರೆ.
ಈ ಬೃಹತ್ ಅಕ್ರಮದಲ್ಲಿ ಅಂದಿನ ವಿಶೇಷ ಜಿಲ್ಲಾಧಿಕಾರಿ ವಾಸಂತಿ ಅಮರ್ ಶಾಮೀಲಾಗಿದ್ದಾರೆ.
500ರಿಂದ 600 ಕೋಟಿ ರೂ. ಬೆಲೆ ಬಾಳುವ ಆಸ್ತಿ ಇದಾಗಿದೆ, ದೇವರಾಜ ಎನ್ನುವವರ ಹೆಸರಿನಲ್ಲಿ ಜಿಪಿಎ ಆಗಿದ್ದು, ಡಿಕೆಶಿ ಮತ್ತು ಡಿ.ಕೆ.ಸುರೇಶ್ ಇಬ್ಬರಿಗೂ ಈ ವ್ಯಕ್ತಿ ಆಪ್ತನಾಗಿದ್ದಾನೆ, ಹಿರಿಯ ಅಧಿಕಾರಿ ರಾಜೇಂದ್ರ ಕಟಾರಿಯಾ ಬಳಿ ಕೇಸ್ ಇದೆ.
ಮುಟ್ಟುಗೋಲು ಹಾಕಿಕೊಳ್ಳಿ
ಮುಖ್ಯಮಂತ್ರಿಗಳೇ ಈ ಜಮೀನು ಮುಟ್ಟುಗೋಲು ಹಾಕಿಕೊಳ್ಳಿ, ಹಗಲು ದರೋಡೆ ನಿಲ್ಲಿಸಿ ಎಂಬುದಾಗಿ ಕುಮಾರಸ್ವಾಮಿ ಹೇಳುತ್ತಿದ್ದಾರೆ, ಆದರೆ, ಮುಖ್ಯಮಂತ್ರಿಯೇ ರಿಯಲ್ ಎಸ್ಟೇಟ್ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ನಕಲಿ ಆಧಾರ್ ಕಾರ್ಡ್ ಬಳಸಿ 500 ಕೋಟಿ ರೂ. ಬೆಲೆಯ ಜಮೀನು ಲೂಟಿ ಹೊಡೆದಿದ್ದಾರೆ, ಕೊಡುಗೆಹಳ್ಳಿ ಸರ್ವೆ ನಂಬರ್ 86 ನೈಸ್ ನೋಟಿಫಿಕೇಶನಲ್ಲಿ ಇದ್ದ ಜಾಗ ಬೇನಾಮಿ ಮಾಡಿಕೊಟ್ಟಿದ್ದಾರೆ, ಶ್ರೀಧರ್, ಚಂದ್ರನ್, ಪುಟ್ಟಗೌರಮ್ಮ ಹೆಸರಿಗೆ ದಾಖಲಾತಿ ಮಾಡಿದ್ದಾರೆ.
ವೆಲ್ಡಿಂಗ್ ಕೆಲಸ ಮಾಡುವ ಚಂದ್ರನ್ ಹೆಸರಿಗೆ ಜಮೀನು ದಾಖಲಾತಿ ಮಾಡಿದ್ದಾರೆ, ನಕಲಿ ಆಧಾರ್ ಬಳಿಸಿ ದಾಖಲಾತಿ ಮಾಡಿದ್ದು, 14 ಎಕರೆ ಜಮೀನು ವ್ಯಕ್ತಿ ಹುಟ್ಟೋಕೆ ಮುನ್ನವೇ ಅವರ ಹೆಸರಿಗೆ ಮಾಡಿದ್ದಾರೆ.
ಕೇಸ್ ಹಾಕಿ ಕೈಬಿಟ್ಟಿದ್ದು
ನೈಸ್ ಕಂಪನಿಯ ಅಶೋಕ್ ಖೇಣಿ ಎಂಟ್ರಿ ಆದ ಮೇಲೆ ಸದರಿ ಜಮೀನಿನ ಮೇಲೆ ಕೋರ್ಟ್ ನಲ್ಲಿ ಇದ್ದ ಕೇಸ್ ಕೈ ಬಿಡ್ತಾನೆ, ಶೇ.40 ನನಗೆ ಕೊಡಿ ಅಂತ ಕೇಸ್ ಹಾಕಿ ಕೈಬಿಟ್ಟಿದ್ದು, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಬೆಂಬಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಕಬಳಿಕೆ ಮಾಡಲಾದ ಜಮೀನಿನ ಇಂದಿನ ಮಾರುಕಟ್ಟೆ ಬೆಲೆ ಸುಮಾರು 500 ರಿಂದ 600 ಕೋಟಿ ರೂ. ಆಗಿದ್ದು, ಅನುಭೋಗದಲ್ಲಿದ್ದ ರೈತರನ್ನು ಹೆದರಿಸಿ-ಬೆದರಿಸಿ ಲಪಟಾಯಿಸಿದ್ದಾರೆ.
ಇಂತಹ ವ್ಯಕ್ತಿ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾರೆ, ಶೀಘ್ರದಲ್ಲಿ ನಾವು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಇವರ ವಿರುದ್ಧ ವಿಚಾರಣೆಗೆ ಅನುಮತಿ ಕೊಡುವಂತೆ ವಿನಂತಿ ಮಾಡುತ್ತೇವೆ ಎಂದರು.
ಕುಮಾರಸ್ವಾಮಿ ಸ್ಥಳ ಪರಿಶೀಲನೆ
ಶುಕ್ರವಾರ ಕೇಂದ್ರ ಸಚಿವ ಕುಮಾರಸ್ವಾಮಿ ಸ್ಥಳ ಪರಿಶೀಲನೆಗೆ ಹೋಗುತ್ತಿದ್ದು, ನಾವೆಲ್ಲರೂ ಅವರ ನೇತೃತ್ವದಲ್ಲಿ ಹೋಗಲಿದ್ದೇವೆ ಎಂದರು.
ನೈಸ್ ಯೋಜನೆಗೆ ನೋಟಿಫಿಕೇಷನ್ ಆಗಿರುವ ಜಮೀನು ಪಡೆಯುವ ಇವರೆಲ್ಲರೂ ಯಾರು ಎಂಬ ತನಿಖೆ ಆಗಬೇಕು ಎಂಬುದಾಗಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ.
ಈ ವೇಳೆ ಡಿ.ಕೆ.ಸುರೇಶ್ ಅವರೊಂದಿಗೆ ದಿವ್ಯ ಪ್ರಸಾದ್, ದೇವರಾಜ್ ಎಂಬ ವ್ಯಕ್ತಿಗಳು ಇರುವ ಫೋಟೋಗಳನ್ನು ಬಿಡುಗಡೆ ಮಾಡಿದ ಮಂಜುನಾಥ್, ಇವರೆಲ್ಲರೂ ನೈಸ್ ಹೆಸರಿಗೆ ನೋಟಿಫಿಕೇಷನ್ ಆಗಿರುವ ಜಮೀನು ಖರೀದಿ ಮಾಡಿರುವವರು, ಇವರಿಗೂ ಮುಖ್ಯಮಂತ್ರಿ ಕುಟುಂಬಕ್ಕೂ ಇರುವ ಸಂಬಂಧವೇನು ಎಂಬುದನ್ನು ಅವರೇ ಹೇಳಬೇಕು ಎಂದರು.
ರಿಯಲ್ ಎಸ್ಟೇಟ್ ಸರಕಾರ
ಇದು ರಿಯಲ್ ಸರಕಾರವೋ ಅಥವಾ ರಿಯಲ್ ಎಸ್ಟೇಟ್ ಸರಕಾರವೋ ಎಂಬುದನ್ನು ಮುಖ್ಯಮಂತ್ರಿಯೇ ಹೇಳಲಿ, ರಿಯಲ್ ಸರಕಾರ ಎನ್ನವುದಾದರೆ ಈ ಎರಡೂ ಆಸ್ತಿಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ, ಆಗ ಮೆಚ್ಚುತ್ತೇವೆ.
ದೂರಿಗೆ ಸಂಬಂಧಸಿದಂತೆ ಇನ್ನೂ ಅನೇಕ ದಾಖಲೆಗಳಿವೆ, ಅವನ್ನೂ ಬಿಡುಗಡೆ ಮಾಡುತ್ತೇವೆ ಎಂದರು.
ಸಚಿವ ಕೃಷ್ಣಬೈರೇಗೌಡ ಅವರು ಕಂದಾಯ ಸಚಿವರಾಗಿದ್ದಾಗ ಇಲಾಖೆ ಅಧಿಕಾರಿಗಳು ಯಾರ್ಯಾರಿಗೆ ಸಹಾಯ ಮಾಡಿದ್ದಾರೆ, ಯಾವ ಅಧಿಕಾರಿಗಳು ಹಗಲು ದರೋಡೆಗೆ ಸಹಕಾರ ನೀಡಿದ್ದಾರೆ ಎಂಬುದು ಸಚಿವರಿಗೆ ಗೊತ್ತಿಲ್ಲವೇ.
ಮಾರಲು ಹೇಗೆ ಸಾಧ್ಯ
ಸರ್ಕಾರದಲ್ಲಿದ್ದವರಿಗೆ ಒಂದು ಕಾನೂನು, ಜನರಿಗೆ ಒಂದು ಕಾನೂನು, ಬಿಎಂ ಕಾವಲ್ ಜಾಗದಲ್ಲಿ ಜಮೀನು ಖರೀದಿ ಮಾಡಿದ್ದೀವಿ ಎನ್ನುತ್ತಾರೆ, ಬಿಎಂ ಕಾವಲ್ ಜಮೀನು ಮೊದಲು ನೈಸ್ ಯೋಜನೆಗೆ ನೋಟಿಫಿಕೇಶನ್ ಆಗಿತ್ತು, ಅದನ್ನು ಬೇರೆಯವರಿಗೆ ಮಾರಲು ಹೇಗೆ ಸಾಧ್ಯ, ಇದರ ನೋಂದಣಿಗೆ ಅಧಿಕಾರಿಗಳು ಹೇಗೆ ಅವಕಾಶ ಮಾಡಿಕೊಟ್ಟರು.
ನೀವು ಕಂದಾಯ ಕಂದಾಯ ಇಲಾಖೆಯಿಂದ ಹೊರಬಂದ ಮೇಲೆ ಇವೆಲ್ಲವೂ ಖಾತೆ ಆಗಿವೆ, ಯಾರ ಯಾರ ಹೆಸರಿಗೆ ಖಾತೆ ಆಗಿದೆ ಎಂಬ ಬಗ್ಗೆ ನನ್ನಲ್ಲಿ ಮಾಹಿತಿ ಇದೆ, ಇದನ್ನು ಕುಮಾರಸ್ವಾಮಿ ಪ್ರಶ್ನಿಸಬಾರದಾ ಎಂದರು.
ಯಾವುದನ್ನೂ ಯಾರೂ ಕೇಳಬಾರದು ಎಂಬ ಫರ್ಮಾನು ಸರಕಾರದಿಂದ ಹೊರಡಿಸಿ, ಅಧಿಕಾರಿಗಳು ಶಾಮೀಲಾಗಿ ಬೇನಾಮಿಗೆ ಆಸ್ತಿ ಮಾಡಿಕೊಟ್ಟಿದ್ದಾರೆ, ಇದನ್ನು ವಾಪಸ್ ಪಡೆಯೋಕೆ ನಿಮ್ಮಿಂದ ಆಗುತ್ತಾ ಎಂದರು.
ಮುಖ್ಯಮಂತ್ರಿ ಒಲೈಕೆ
ಕುಮಾರಸ್ವಾಮಿ ಮಾತಿಗೆ ಸರ್ಕಾರದ ಮಂತ್ರಿಗಳು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಒಲೈಕೆಗೆ ಮಾತಾಡಲೇಬೇಕು.
ಕುಮಾರಸ್ವಾಮಿ ಜನರ ಮುಂದೆ ಇಟ್ಟ ನೈಸ್ ಮತ್ತು ಮುಖ್ಯಮಂತ್ರಿ ಅಕ್ರಮಗಳ ಬಗ್ಗೆ ಈ ಮಹಾಶಯರು ಮಾತನಾಡುತ್ತಿಲ್ಲ, ಕುಮಾರಸ್ವಾಮಿ ಬಗ್ಗೆ ಮಾತ್ರ ಮಾತನಾಡುತ್ತಾರೆ, ಸಚಿವ ಬಾಲಕೃಷ್ಣ ಹಗುರವಾಗಿ ಮಾತನಾಡಿದ್ದಾರೆ, ಸರಕಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು, ಕುಮಾರಸ್ವಾಮಿ ಅವರಿಗೆ ಬಹಳ ಕೆಲಸ ಇದೆ, ಅದು ಬಿಟ್ಟು ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಾರೆ ಎಂದಿದ್ದು, ರಾಜ್ಯದಲ್ಲಿ ವಿಪಕ್ಷವಾಗಿ ರೈತರ ಸಮಸ್ಯೆ ಸರ್ಕಾರದ ಗಮನಕ್ಕೆ ತರುವುದು ತಪ್ಪಾ.
ಹೋರಾಟದಿಂದ ಹಿಂದೆ ಸರಿಯುತ್ತೇವೆ
ಬಿಡದಿ ಟೌನ್ ಶಿಪ್ ಜಮೀನನ್ನು ಕುಮಾರಸ್ವಾಮಿ ಏಕೆ ಡಿನೋಡಿಫಿಕೇಶನ್ ಮಾಡಡಲಿಲ್ಲ ಎಂಬುದಾಗಿ ಕೃಷ್ಣಬೈರೇಗೌಡ ಕೇಳುತ್ತಾರೆ, ಕುಮಾರಸ್ವಾಮಿ ಅವಧಿಯಲ್ಲಿ ಬಿಡದಿ ಟೌನ್ ಶಿಪ್ ಗೆ ನೋಟಿಫಿಕೇಶನ್ ಆಗಿರುವ ದಾಖಲೆ ತೋರಿಸಿದರೆ ಬಿಡದಿ ಹೋರಾಟದಿಂದ ನಾವು, ಕುಮಾರಸ್ವಾಮಿ ಹಿಂದೆ ಸರಿಯುತ್ತೇವೆ.
ಕಂದಾಯ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ನೋಟಿಫಿಕೇಶನ್ ಆಗಿಲ್ಲ ಎಂಬುದಾಗಿ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ, ಈ ಮಾಹಿತಿ ಸಚಿವರಿಗೆ ಇಲ್ಲದಿದ್ದರೆ ಹೇಗೆ ಎಂದರು.


