ಸಿಜೆಪಿ ಸಂಚುಗಳಿಗೆ ಕರ್ನಾಟಕ ಕಾಂಗ್ರೆಸ್ ಹಣ ಪೂರೈಸುತ್ತಿದೆ: ಕುಮಾರಸ್ವಾಮಿ ಆರೋಪ
ಬೆಂಗಳೂರು:ಭಾರತವನ್ನು ಅಭದ್ರಗೊಳಿಸಲು ನಡೆಯುತ್ತಿರುವ ಸಂಚುಗಳಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಶುದ್ಧೀಕರಣ ಹಾಗೂ ಅಕ್ರಮ ನೇಮಕಾತಿಗಳಿಗೆ ಚರಮಗೀತೆ ಹಾಡಲು ಉದ್ಯೋಗಾಕಾಂಕ್ಷಿಗಳು, ಉದ್ಯೋಗ ವಂಚಿತರು, ಆಯೋಗದಿಂದ ಅನ್ಯಾಯಕ್ಕೆ ಒಳಗಾದವರು ಹಾಗೂ ವಿದ್ಯಾರ್ಥಿ ಯುವಜನರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಹೋರಾಟಗಳಿಗೆ ಕಾಂಗ್ರೆಸ್ ನಿಂದ ನೆರವು ಸಿಗುತ್ತಿದೆ ಎಂಬುದನ್ನು ಸ್ವತಃ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದರು.
ಪ್ರಿಯಾಂಕ್ ಖರ್ಗೆ ಹೇಳಿಕೆಯೇ ಸಾಕ್ಷಿ
ಪ್ರಿಯಾಂಕ್ ಖರ್ಗೆ ಗುರುವಾರ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ, ಕಾಂಗ್ರೆಸ್ ಮತ್ತು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಎರಡೂ ಒಂದೇ ಎಂದಿದ್ದಾರೆ, ಅಲ್ಲದೆ, ಸಿಜೆಪಿ ಏನು ಗಲಾಟೆ ಮಾಡಿದರೂ ನಾವು ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಮೂಲಕ ನೆರವಾಗಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ, ಸಿಜೆಪಿಗೆ ಒಂದು ಕಾನೂನು, ಬೇರೆಯವರಿ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವರು ಇಂತಹ ಹೇಳಿಕೆ ನೀಡಿರುವುದು ಅಘಾತಕಾರಿ, ರಾಷ್ಟ್ರದಲ್ಲಿ ಎಂತಹ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ, ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಪ್ರಿಯಾಂಕ್ ಖರ್ಗೆ ಕೊಟ್ಟಿರುವ ಹೇಳಿಕೆ ಗಂಭೀರವಾದುದು.
ಇವರು ಸರ್ಕಾರದ ಹಣ ಅದರಲ್ಲೂ, ಕನ್ನಡಿಗರ ತೆರಿಗೆ ಹಣವನ್ನು ದೆಹಲಿಯ ಗಲಭೆಕೋರರಿಗೆ ರವಾನೆ ಮಾಡುತ್ತಿದ್ದಾರೆ.
ಪ್ರತಿಪಕ್ಷಗಳ ಕಾಂಗ್ರೆಸ್ ದಬ್ಬಾಳಿಕೆ
ಕರ್ನಾಟಕದಲ್ಲಿ ಪ್ರತಿಪಕ್ಷಗಳ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ದೇಶದ ಪರ ಪೋಸ್ಟ್ ಹಾಕಿದವರ ಮೇಲೆ ಕೇಸು ದಾಖಲು ಮಾಡಲಾಗುತ್ತಿದೆ, ರಾಷ್ಟ್ರದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಶಕ್ತಿಗಳಿಗೆ ಫಂಡಿಂಗ್ ಮಾಡುತ್ತಿದೆ.
ಸಿಜೆಪಿ ವಿರುದ್ಧ ಯಾವ ಕ್ರಮ ಕೈಗೊಳ್ಳುವುದಿಲ್ಲ, ಅವರು ಹಾಗೂ ಕಾಂಗ್ರೆಸ್ ಇಬ್ಬರೂ ಒಂದೇ ಎನ್ನುವ ಮೂಲಕ ರಾಷ್ಟ್ರ ವಿರೋಧಿ ಅಭಿಪ್ರಾಯವನ್ನು ಪ್ರಿಯಾಂಕ್ ಖರ್ಗೆ ವ್ಯಕ್ತಪಡಿಸಿದ್ದಾರೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಸಿಜೆಒಇಗೆ ಕುಮ್ಮಕ್ಕು ನೀಡಿ ಆಡಿರುವ ಮಾತುಗಳ ವಿಡಿಯೊ ಸುದ್ದಿಗಾರರ ಮುಂದೆ ಪ್ರದರ್ಶಿಸಿದ ಕುಮಾರಸ್ವಾಮಿ, ಅಪ್ಪಾ.., ಪ್ರಿಯಾಂಕ್ ಖರ್ಗೆ ಇಲ್ಲಿದೆ ನೋಡಿ ನಿಮ್ಮ ಹೇಳಿಕೆ, ಇಂಥ ಹೇಳಿಕೆಯನ್ನು ಯಾವ ಆಧಾರದ ಮೇಲೆ ಕೊಟ್ಟಿದ್ದೀರಿ, ಕರ್ನಾಟಕದಲ್ಲಿ ಹಣ ಬಿಟ್ಟಿ ಬಿದ್ದಿದೆಯೇ.
ರಾಹುಲ್ ಗಾಂಧಿ ಹೋರಾಟಗಳಿಗೆ ದುಡ್ಡು
ಸಿಜೆಪಿ ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತಿದೆ, ರಾಹುಲ್ ಗಾಂಧಿ ನೇತೃತ್ವ ವಹಿಸಿರುವ ಹೋರಾಟಗಳಿಗೆ ದುಡ್ಡು ಯಾರು ಕೊಡುತ್ತಿದ್ದಾರೆ, ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧ್ಯಕ್ಷರ ಪುತ್ರ ಹಾಗೂ ಕರ್ನಾಟಕದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಇದಕ್ಕೆ ಸ್ಪಷ್ಟನೆ ನೀಡಬೇಕು, ರಾಜ್ಯದ ಜನರ ಹಣವನ್ನು ರಾಷ್ಟ್ರ ವಿರೋಧಿ ಕೃತ್ಯ ನಡೆಸುವವರಿಗೆ ಕೊಡಲಾಗುತ್ತಿದೆ.
ಮುಖ್ಯಮಂತ್ರಿ ಡಿ.ಕೆಶಿವಕುಮಾರ್, ಎಲ್ಲವನ್ನು ಕಾಲವೇ ನಿರ್ಣಯ ಮಾಡುತ್ತದೆ ಎನ್ನುತ್ತಾ ಕಾಲಹರಣ ಮಾಡುತ್ತಿದ್ದರೆ, ಮತ್ತೊಂದು ಕಡೆ ರಾಜ್ಯದ ಹಣ ದುರುದ್ದೇಶಗಳಿಗೆ ಪೋಲಾಗುತ್ತಿದೆ, ಕಾಲವೇ ಎಲ್ಲವನ್ನೂ ನಿರ್ಣಯ ಮಾಡಿ ಇವರ ಎಲ್ಲಾ ಒಳಸಂಚು ಹಾಗೂ ರಾಷ್ಟ್ರ ವಿರೋಧಿ ಕೃತ್ಯಗಳು ಬಯಲಾಗಲಿವೆ ಎಂದರು.
ಅಗತ್ಯಬಿದ್ದರೆ ಕುಮಾರಸ್ವಾಮಿ ಅವರನ್ನೂ ವಿಚಾರಣೆಗೆ ಕರೆಸುತ್ತೇವೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ನೆನಪಿಸಿದ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ ಬಗ್ಗೆಯೂ ಕಾಲವೇ ನಿರ್ಣಯ ಮಾಡುತ್ತದೆ, ಅವರ ದುರಹಂಕಾರಕ್ಕೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದರು.
ಪ್ರಧಾನಿ ಮೋದಿ ಬಳಿಗೆ ಮಲ್ಲಿಕಾರ್ಜುನ ಖರ್ಗೆ
ಸಿದ್ದಾರ್ಥ ಟ್ರಸ್ಟ್ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಬಳಿಗೆ ಪ್ರಿಯಾಂಕ್ ಖರ್ಗೆ ತಂದೆ ಮಲ್ಲಿಕಾರ್ಜುನ ಖರ್ಗೆ ಏಕೆ ಹೋಗಿದ್ದರು, ಇದಕ್ಕೆ ಪ್ರಿಯಾಂಕ್ ಉತ್ತರ ನೀಡುತ್ತಾರಾ ಎಂದು ಪ್ರಶ್ನಿಸಿದರು.
ರಾಜ್ಯದ ಗೃಹ ಸಚಿವರ ಇಂತಹ ನಡವಳಿಕೆಗಳು ಒಳ್ಳೆಯದಲ್ಲ, ಆಕ್ರಮಣಶೀಲ ನಡವಳಿಕೆ ಬಿಡಬೇಕು, ಯಾರ ಮೇಲಾದರೂ ತನಿಖೆಗೆ ಆದೇಶ ಮಾಡುತ್ತೇನೆ ಎಂದರೆ ಬೀದಿಯಲ್ಲಿ ಹೋಗುವವರ ಮೇಲೆಲ್ಲಾ ತನಿಖೆಗೆ ಆದೇಶ ಮಾಡಲು ಆಗುತ್ತದೆಯೇ.
ಕೇಂದ್ರದಲ್ಲಿ ತಮಗೆ ಯಾವುದೇ ಕಿಮ್ಮತ್ತು ಇಲ್ಲ ಎಂಬ ಟೀಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಯಾರಾದರೂ ಕನಸಿನಲ್ಲಿ ಬಂದು ಇದನ್ನು ಇವರಿಗೆ ಹೇಳಿದರಾ, ಕೇಂದ್ರ ಸಚಿವನಾಗಿ ದೆಹಲಿಯಲ್ಲಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದನ್ನು ಇವರಿಗೆ ಹೇಳಬೇಕಾಗಿಲ್ಲ, ಕೇವಲ 200 ಕೋಟಿ ರೂ. ಲಾಭದಲ್ಲಿದ್ದ ಬಿಎಚ್ಇಎಲ್ ಕಾರ್ಖಾನೆಯನ್ನು 1500 ಕೋಟಿ ರೂ.ಗೂ ಹೆಚ್ಚಿನ ಲಾಭ ಗಳಿಸುವಂತೆ ಮಾಡಲಾಗಿದೆ.
ಲಾಭದ ಗುರಿ ಮುಟ್ಟಲು ಟಾಸ್ಕ್
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಇವತ್ತು 3,500 ಕೋಟಿ ರೂ. ಲಾಭ ಗಳಿಸುತ್ತಿದೆ, ಮುಂದಿನ ವರ್ಷ ಕನಿಷ್ಠ 10,000 ಕೋಟಿ ರೂ. ಲಾಭದ ಗುರಿ ಮುಟ್ಟುವಂತೆ ಟಾಸ್ಕ್ ನೀಡಲಾಗಿದೆ.
ಪೇಸಿಎಂ, 40% ಪರ್ಸೆಂಟ್ ಎಂಬ ಪೋಸ್ಟರ್ ಅಂಟಿಸಿಕೊಂಡು ಬಂದವರು, ಕಳೆದ ಮೂರು ವರ್ಷಗಳಲ್ಲಿ ಏನು ಮಾಡಿದ್ದಾರೆ, ಬಿಡದಿ ರೈತರನ್ನು ಒಕ್ಕಲೆಬ್ಬಿಸುವುದು ಮತ್ತು ನೈಸ್ ಕಂಪನಿ ಲೂಟಿ ಮಾಡುವುದು ನಿಮ್ಮ ಟಾಸ್ಕ್, ನನ್ನ ಕೆಲಸದ ಬಗ್ಗೆ ನನ್ನ ದಾಖಲೆಗಳು ಮಾತನಾಡುತ್ತವೆ, ನಿಮ್ಮಿಂದ ಸರ್ಟಿಫಿಕೇಟ್ ಪಡೆಯಬೇಕಿಲ್ಲ.
ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಕೆಪಿಎಸ್ಸಿಯಿಂದ 24 ಎಂಜಿನಿಯರುಗಳ ಆಯ್ಕೆ ಪ್ರಕ್ರಿಯೆಯಲ್ಲಿ 10 ಅಭ್ಯರ್ಥಿಗಳು ಅಕ್ರಮದ ಮುಖಾಂತರ ಆಯ್ಕೆಯಾಗಿದ್ದರು, ಈ ನೇಮಕಾತಿ ರದ್ದುಗೊಳಿಸುವಂತೆ ಕೆಪಿಎಸ್ಸಿಯಲ್ಲಿ ತನಿಖೆಯಾಗಿ ವರದಿ ನೀಡಿದರೂ ಏಕಾಏಕಿ ತಿರಸ್ಕಾರ ಮಾಡಿ ಅಕ್ರಮ ಎಸಗಿದ್ದ 24 ಜನರಿಗೆ ನೇಮಕಾತಿ ಆದೇಶ ಏಕೆ ನೀಡಿದಿರಿ ಎಂದು ಪ್ರಶ್ನಿಸಿದರು.
ʼಕಳ್ಳನ ಮನಸ್ಸು ಹುಳ್ಳುಳ್ಳಗೆ’
ಪಶುವೈದ್ಯಕೀಯ ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ಈ ಬಗ್ಗೆ ಹೈಕೋರ್ಟ್ ತನಿಖೆಗೆ ಆದೇಶಿಸಿದರೆ ತಡೆಯಾಜ್ಞೆ ಏಕೆ ತರುತ್ತೀರಿ, ನೀವು ಪಾರದರ್ಶಕವಾಗಿದ್ದರೆ ನ್ಯಾಯಯುತ ತನಿಖೆಗೆ ಅವಕಾಶ ನೀಡಬೇಕಿತ್ತು, ʼಕಳ್ಳನ ಮನಸ್ಸು ಹುಳ್ಳುಳ್ಳಗೆ’ ಎನ್ನುವಂತೆ ಖರ್ಗೆ ಅವರೇ ನಿಮ್ಮ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿಲ್ಲವೇ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಪಾಪದ ಹುಡುಗರನ್ನು ಕರೆತಂದು ಅನುಮಾನ ವ್ಯಕ್ತಪಡಿಸುತ್ತೀರಿ, ತನಿಖಾಧಿಕಾರಿಗಳು ಸಮಸ್ಯೆ ತಂದಿಟ್ಟುಕೊಂಡರೆ ಮುಂದೆ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದೇನೆಯೇ ಹೊರತು, ನಾನು ಯಾರಿಗೂ ಧಮ್ಕಿ ಹಾಕಿಲ್ಲ, ಧಮ್ಕಿ ಹಾಕುವ ಶೈಲಿ, ಮನಃಸ್ಥಿತಿ, ನಿಮ್ಮದು ಎಂದು ತಿರುಗೇಟು ನೀಡಿದರು.


