ದಸರಾ ಮುಕ್ತಾಯಕ್ಕೂ ಮುನ್ನ ಕಿಂಗ್ ಪಿನ್ ಬಂಧಿಸಬೇಕು: ಕುಮಾರಸ್ವಾಮಿ ಗಡುವು
ಬೆಂಗಳೂರು:ನಾಡಹಬ್ಬ ದಸರಾ ಹಬ್ಬ ಮುಕ್ತಾಯಕ್ಕೂ ಮುನ್ನ ಸ್ಟಿಂಗ್ ಆಪರೇಷನ್ ಕಿಂಗ್ ಪಿನ್ ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಿಂಗ್ ಪಿನ್ ಬಂಧನಕ್ಕೆ ನೀಡಿದ್ದ ಎರಡು ದಿನದ ಗಡುವು ಮುಗಿದ ಹಿನ್ನೆಲ್ಲೆಯಲ್ಲಿ ಇಂದು ಪೋಲಿಸ್ ಮಹಾನಿರ್ದೇಶಕರ ಕಚೇರಿ ಮುತ್ತಿಗೆಗೆ ಅವರು ಮುಂದಾಗಿದ್ದರು.
ಪೋಲಿಸ್ ಮಹಾನಿರ್ದೇಶಕರ ಭೇಟಿ
ಈ ಸಂದರ್ಭದಲ್ಲಿ ಪಕ್ಷದ ಕಚೇರಿಯಿಂದ ಕಾಲ್ನಡಿಗೆ ಮೂಲಕ ನೃಪತುಂಗ ರಸ್ತೆಯಲ್ಲಿನ ಪೋಲಿಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಗೆ ತೆರಳುತ್ತಿದ್ದ ಮಾರ್ಗದಲ್ಲಿ ಪೋಲಿಸ್ ಸಿಬ್ಬಂದಿ ಕುಮಾರಸ್ವಾಮಿ ಅವರನ್ನು ತಡೆದು ಮನವೊಲಿಸಿ, ಪೋಲಿಸ್ ಮಹಾನಿರ್ದೇಶಕರ ಭೇಟಿಗೆ ಕರೆದೊಯ್ದರು.
ಜೆಡಿಎಸ್ನ ಕೆಲವು ಶಾಸಕರ ಜೊತೆ ಪೋಲಿಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಕುಮಾರಸ್ವಾಮಿ ತಕ್ಷಣವೇ ಹಗರಣದ ಕಿಂಗ್ ಪಿನ್ ಬಂಧನ ಮಾಡಬೇಕು, ಕಾನೂನಾತ್ಮಕವಾಗಿ ತನಿಖೆ ನಡೆಸಬೇಕು, ಇಲ್ಲವಾದರೆ, ದಸರಾ ಹಬ್ಬ ಮುಗಿಯುತ್ತಿದ್ದಂತೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ನಾವು ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉದ್ಯಮಿಗಳ ಸ್ಟಿಂಗ್ ಆಪರೇಷನ್ ಮಾಡಿ ಕೋಟ್ಯಂತರ ರೂ. ಲೂಟಿ ಮಾಡಿರುವುದಲ್ಲದೆ, ಹಗರಣದ ಕಿಂಗ್ ಪಿನ್ ಪರ್ಯಾಯ ಆಡಳಿತ ನಡೆಸುತ್ತಿದ್ದು, ಈ ವ್ಯಕ್ತಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲ ಇದೆ, ಆದ್ದರಿಂದ ರಾಜಾರೋಷವಾಗಿ ಈ ಕೃತ್ಯ ಎಸಗುತ್ತಿದ್ದಾನೆ ಎಂದರು.
ನನ್ನ ವೈಯಕ್ತಿಕ ಹೋರಾಟವಲ್ಲ
ಇದು ನನ್ನ ವೈಯಕ್ತಿಕ ಹೋರಾಟವಲ್ಲ, ಸಾರ್ವಜನಿಕವಾಗಿ ಎದುರಾಗಿರುವ ಈ ಕಂಟಕವನ್ನು ಹೋಗಲಾಡಿಸಲು ನಾನು ಬೀದಿಗೆ ಇಳಿದಿದ್ದೇನೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದ್ದು ನಾನೇ ಎಂದು ಕಿಂಗ್ ಪಿನ್ ಹೇಳಿಕೊಂಡಿದ್ದರೂ ಇದುವರೆಗೆ ಆತನನ್ನು ಏಕೆ ಬಂಧಿಸಿಲ್ಲ.
ಪೋಲಿಸರು ಒತ್ತಡಕ್ಕೆ ಮಣಿದು ಕಿಂಗ್ ಪಿನ್ ಬಂಧಿಸಲಿಲ್ಲ ಎಂದರೆ, ಮುಂದಾಗುವ ಅನಾಹುತಗಳಿಗೆ ನಾನು ಹೊಣೆ ಅಲ್ಲ ಎಂದು ಎಚ್ಚರಿಸಿದ್ದಾರೆ.
ಡಿಜಿಪಿ ಕಚೇರಿ ಮುತ್ತಿಗೆ ನಿರ್ಧಾರ
ಇದಕ್ಕೂ ಮುನ್ನ ಕುಮಾರಸ್ವಾಮಿ, ಪಕ್ಷದ ಕಚೇರಿಯಲ್ಲಿ ಶಾಸಕರು ಮತ್ತು ಮುಖಂಡರ ಜೊತೆ ಚರ್ಚೆ ನಡೆಸಿ, ಪೋಲಿಸ್ ಮಹಾನಿರ್ದೇಶಕರ ಕಚೇರಿ ಮುತ್ತಿಗೆ ನಿರ್ಧಾರ ಕೈಗೊಂಡರು.
ಪಕ್ಷದ ಕಚೇರಿಯಲ್ಲಿ ನೆರೆದಿದ್ದ ಕಾರ್ಯಕರ್ತರ ಜೊತೆ ಪೋಲಿಸ್ ಮಹಾನಿರ್ದೇಶಕರ ಕಚೇರಿ ಮುತ್ತಿಗೆಗೆ ಕುಮಾರಸ್ವಾಮಿ ಮುಂದಾದರು.
ಈ ವೇಳೆ ಫ್ರೀಡಂ ಪಾರ್ಕ್ ಬಳಿ ಕುಮಾರಸ್ವಾಮಿ ಮತ್ತು ಇತರ ಮುಖಂಡರನ್ನು ತಡೆದ ಹಿರಿಯ ಪೋಲಿಸ್ ಅಧಿಕಾರಿಗಳು ಅವರ ಮನವೊಲಿಸಿ ಡಿಜಿಪಿ ಕಚೇರಿಗೆ ಕರೆದೊಯ್ದರು.
ಬಂಧನಕ್ಕೆ ಮುಖ್ಯಮಂತ್ರಿ ಬಿಡುತ್ತಿಲ್ಲ
ಡಿಜಿಪಿ ಕಚೇರಿಗೆ ತೆರಳುವುದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಕಿಂಗ್ ಪಿನ್ ಬಂಧನಕ್ಕೆ ನೀಡಿದ್ದ ಗಡುವು ಮುಗಿದಿದೆ, ಆತನ ಬಂಧಿಸಲು ಮುಖ್ಯಮಂತ್ರಿ ಶಿವಕುಮಾರ್ ಬಿಡುತ್ತಿಲ್ಲ.
ಆರೋಪಿಯನ್ನು ಪದೇ ಪದೇ ಭೇಟಿ ಮಾಡಿ ಸ್ಟಿಂಗ್ ಆಪರೇಷನ್ಗೆ ಅವರೇ ಕುಮ್ಮಕ್ಕು ನೀಡುತ್ತಿರುವಂತಿದೆ, ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಒತ್ತಾಯಿಸಿದರೆ, ನನ್ನ ಆರೋಗ್ಯವನ್ನೇ ಶಪಿಸುತ್ತಾ ಅನಾಗರೀಕವಾಗಿ ವರ್ತಿಸುತ್ತಿದ್ದಾರೆ.
ಕೂಡಲೇ ಹಗರಣದ ಕಿಂಗ್ ಪಿನ್ ಬಂಧಿಸಬೇಕು, ಈ ವಿಷಯಕ್ಕೆ ಅಂತ್ಯ ಕಾಣಿಸುವವರೆಗೂ ನನ್ನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.


