ಧರಣಿನಿರತ ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಸಂದೇಶ
ಬೆಂಗಳೂರು:ಸರ್ಕಾರವನ್ನು ಬೆದರಿಸಬೇಡಿ, ಪ್ರತಿಷ್ಠೆ ಬಿಟ್ಟು ಮಾತುಕತೆಗೆ ಬನ್ನಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧರಣಿನಿರತ ಆಶಾ ಕಾರ್ಯಕರ್ತೆಯರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಿಮ್ಮ ಪರವಾಗಿ ಇದ್ದೇವೆ, ಆದರೆ, ಹೆದರಿಸಿ ಕೆಲಸ ಮಾಡಿಸಿಕೊಳ್ಳಬಹುದು ಎಂಬುದು ಯಾವ ಸರ್ಕಾರದಲ್ಲೂ ನಡೆಯುವುದಿಲ್ಲ.
ನಿಮ್ಮ ಸಮಸ್ಯೆ ಅರಿವಿದೆ
ನಿಮ್ಮ ಸಮಸ್ಯೆ ಕುರಿತು ಅರಿವಿದೆ, ಪರಿಹಾರ ನೀಡುತ್ತೇವೆ, ಧರಣಿ ಬಿಟ್ಟು ಮಾತುಕತೆಗೆ ಬನ್ನಿ, ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನ್ಯಾಯ ಕೊಡಿಸುತ್ತೇನೆ.
ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ, ನಿಮಗೆ ಇಂತಹ ಮಾತು ಕೊಟ್ಟರೆ ಉಳಿದ 17 ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವವರೂ ಇದನ್ನೇ ಕೇಳುತ್ತಾರೆ.
ಮುಖ್ಯಮಂತ್ರಿ ಭರವಸೆ ಮೇಲೆ ನಂಬಿಕೆ ಇಲ್ಲವೆಂದಾದರೆ, ನಾನೇನು ಮಾಡುವುದು, ನಾನು ಯಾರ ಬಳಿ ಲಿಖಿತ ಭರವಸೆ ಪಡೆದುಕೊಳ್ಳಲಿ, ಸರ್ಕಾರಕ್ಕೂ ಇತಿಮಿತಿ ಇದೆ, ಅದರಡಿ ಕೆಲಸ ನಿರ್ವಹಿಸಬೇಕಿದೆ.
ನಿಮ್ಮನ್ನು ಕೇಂದ್ರ ನೇಮಿಸಿದೆ
ಕೇಂದ್ರ ಸರ್ಕಾರ ನಿಮ್ಮನ್ನು ನೇಮಿಸಿದೆ, ಅವರ ಮುಂದೆ ನಿಮ್ಮ ಬೇಡಿಕೆ ಇಡುತ್ತಿಲ್ಲ, ಲಿಖಿತ ಭರವಸೆಯನ್ನೂ ಕೇಳುತ್ತಿಲ್ಲ, ರಾಜ್ಯ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದೀರಿ.
ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ, ಆದರೆ, ಸರ್ಕಾರದ ಇತಿಮಿತಿಯಲ್ಲಿ ನಿಮ್ಮ ಗೌರವಧನ ಹೆಚ್ಚಿಸಬೇಕು, ಈಗಾಗಲೇ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ, ವಿಶ್ವಾಸ ಇಟ್ಟು ಮಾತುಕತೆಗೆ ಬನ್ನಿ ಎಂದರು.
ಬೇರೆಯವರು ನಿಮ್ಮನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ, ಅವರು ನಿಮಗೆ ಯಾವುದೇ ಸಹಾಯ ಮಾಡುವುದಿಲ್ಲ, ಇದರಲ್ಲಿ ಬಹಳ ಗಂಭೀರ ವಿಚಾರಗಳಿವೆ, ಆಶಾ ಕಾರ್ಯಕರ್ತೆಯರು ಮಾತ್ರವಲ್ಲ, ಈ ರೀತಿ ಪ್ರತಿಭಟನೆಗೆ ಬಹಳ ಮಂದಿ ಸಿದ್ಧತೆ ಮಾಡಿಕೊಳುತ್ತಿದ್ದಾರೆ.
ಗ್ಯಾರಂಟಿಗಳ ಸೌಲಭ್ಯವನ್ನೂ ಕೊಟ್ಟಿದ್ದೇವೆ
ಗ್ಯಾರಂಟಿಗಳನ್ನು ಅನುಷ್ಟಾನ ವೇಳೆ, ನಿಮ್ಮ ಒಳಿತಿಗಾಗಿ ಚರ್ಚಿಸಿ, ನಿಮಗೂ ಉಪಯೋಗವಾಗುವಂತೆ ಜಾರಿ ಮಾಡಿದ್ದೇವೆ, ಮನೆ ಯಜಮಾನಿಗೆ ಅನುಕೂಲವಾಗುವಂತೆ ಉಚಿತ ವಿದ್ಯುತ್, 2,000 ರೂ. ಗೃಹಲಕ್ಷ್ಮೀ ಹಣ ನೀಡುತ್ತಿದ್ದೇವೆ, ತಮಗೂ ಈ ಬಗ್ಗೆ ಅರಿವಿದೆ.
ನಿಮ್ಮನ್ನು ಹಲವು ಸಲ ಭೇಟಿಯಾಗಿದ್ದೇನೆ, ನೆಲಮಂಗಲಕ್ಕೆ ಹೋಗಿ ಭೇಟಿ ಮಾಡಿ ಬಂದಿದ್ದೇನೆ, ಹೆಣ್ಣು ಎಂದರೆ ಕುಟುಂಬದ ಕಣ್ಣು, ಹೆಣ್ಣು ಮಕ್ಕಳ ಬಗ್ಗೆ ಕಾಳಜಿ, ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ ಎಂದರು.


