ಮುಖ್ಯಮಂತ್ರಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಪತ್ರ
ಬೆಂಗಳೂರು: ವನ್ಯಜೀವಿ-ಮಾನವ ನಡುವಿನ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಕಾಡಿನಂಚಿನ ಗ್ರಾಮಗಳಿಗೆ ರಾತ್ರಿಯ ವೇಳೆ ಬದಲಾಗಿ ಹಗಲಿನಲ್ಲಿ ಮಾತ್ರ 3 ಫೇಸ್ ವಿದ್ಯುತ್ ಒದಗಿಸುವಂತೆ ಮುಖ್ಯಮಂತ್ರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸಚಿವರು, ರಾಜ್ಯಾದ್ಯಂತ ಕಾಡಿನಂಚಿನಲ್ಲಿರುವ ಪ್ರದೇಶಗಳಿಗೆ ಆನೆ, ಹುಲಿ, ಚಿರತೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಾಣ ಹಾನಿ ಆಗುತ್ತಿದೆ.
ರಾತ್ರಿಯ ವೇಳೆ 3 ಫೇಸ್ ವಿದ್ಯುತ್ ಪೂರೈಕೆ ಮಾಡಿದರೆ ರೈತರು ಪಂಪ್ ಸೆಟ್ ಆನ್ ಮಾಡಲು ಮತ್ತು ಆಫ್ ಮಾಡಲು ರಾತ್ರಿಯ ವೇಳೆ ಸಂಚರಿಸುವ ಕಾರಣ ಮಾನವ-ವನ್ಯಜೀವಿಗಳ ನಡುವೆ ಸಂಘರ್ಷ ಹೆಚ್ಚುತ್ತದೆ. ಹಗಲು ವೇಳೆ 3ಫೇಸ್ ವಿದ್ಯುತ್ ಪೂರೈಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕಾಡಂಚಿನ ಗ್ರಾಮಗಳಿಗೆ ರಾತ್ರಿಯ ವೇಳೆ 3 ಫೇಸ್ ವಿದ್ಯುತ್ ಪೂರೈಸದಂತೆ ಇಂಧನ ಇಲಾಖೆಗೆ ನಿರ್ದೇಶನ ನೀಡುವಂತೆ ಇಂಧನ ಸಚಿವರನ್ನೂ ಸಚಿವರು ಕೋರಿದ್ದಾರೆ.