ಅಮೃತ ಮಹೋತ್ಸವ ಹಾಗೂ ಈಡಿಗರ 26 ಪಂಗಡಗಳ ಸಮಾವೇಶ
ಬೆಂಗಳೂರು:ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗರ ಹಾಗೂ 26 ಪಂಗಡಗಳ ಬೃಹತ್ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 10ರಂದು ನಡೆಯಲಿದೆ ಎಂದು ಈಡಿಗ ಸಮಾಜದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಅಸ್ತಿತ್ವಕ್ಕೆ ಬಂದು 78 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
1995ರಲ್ಲಿ ನಡೆದ ಮೂರನೇ ಬೃಹತ್ ಈಡಿಗ ಸಮಾವೇಶದಲ್ಲಿ ನಿರ್ಧರಿಸಿದಂತೆ ಒಂದು ಸಮುದಾಯ ಒಂದೇ ಜಾತಿ ಎಂಬ ಘೋಷಣೆಯೊಂದಿಗೆ 26 ಉಪ ಪಂಗಡಗಳು ಒಂದೇ ಎಂದು ತೋರಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಬೃಹತ್ ಕಾರ್ಯಕ್ರಮ
ಸಮುದಾಯದ ಸಂಖ್ಯಾಬಲವನ್ನು ಪ್ರದರ್ಶಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಮ್ಮ ಕುಲಕಸುಬನ್ನು ರಾಜ್ಯ ಸರ್ಕಾರ ಕಿತ್ತು ಕೊಂಡಿದೆ. ಅದಕ್ಕೆ ಪರ್ಯಾಯವಾಗಿ ಬೇರೆ ವೃತ್ತಿ ನೀಡುವ ಪ್ರಯತ್ನವನ್ನು ಯಾವುದೇ ಸರ್ಕಾರಗಳು ಮಾಡಿಲ್ಲ, ಹಾಸ್ಟೆಲ್ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ನೀಡಿದ್ದ ಐದು ಕೋಟಿ ರೂಪಾಯಿ ಇದುವರೆಗೂ ಬಿಡುಗಡೆ ಆಗಿಲ್ಲ. ಹಣ ಬಿಡುಗಡೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಟಿ.ಶಿವಕುಮಾರ್, ಎಸ್.ಹೆಚ್. ಪದ್ಮ ರವೀಂದ್ರ, ಪ್ರಧಾನ ಕಾರ್ಯದರ್ಶಿ ಹೆಚ್.ಟಿ.ಮೋಹನ್ ದಾಸ್, ಜಂಟಿ ಕಾರ್ಯದರ್ಶಿ ರಾಮೋಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.