ಕನ್ನಡಿಗರಿಗೆ ಶೇಕಡ 100ರಷ್ಟು ‘ಡಿ’ ಗ್ರೂಪ್ ಹುದ್ದೆಗಳು ಮೀಸಲು
ಬೆಳಗಾವಿ: 2022ರ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆದ ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶದ ಮೂಲಕ 57 ಕಂಪನಿಗಳೊಂದಿಗೆ 5,41,369 ಕೋಟಿ ರೂ.ಗಳ ಹೂಡಿಕೆಗೆ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಎಂ.ಚಂದ್ರಪ್ಪ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಹುಬ್ಬಳ್ಳಿಯಲ್ಲಿ ನಡೆದ ಎಫ್ಎಂಸಿಜಿ ಹೂಡಿಕೆದಾರರ ಸಮಾವೇಶದಲ್ಲೂ 16 ಕಂಪನಿಗಳೊಂದಿಗೆ ರಾಜ್ಯದಲ್ಲಿ 1,275 ಕೋಟಿ ರೂ. ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಯೋಜನೆಗಳ ಕಾರ್ಯಾರಂಭಕ್ಕೆ 3 ರಿಂದ 4 ವರ್ಷ
ಇನ್ವೆಸ್ಟ್ ಕರ್ನಾಟಕದಲ್ಲಿ ಮಾಡಿಕೊಳ್ಳಲಾದ ಒಡಂಬಡಿಕೆಗಳ ಪೈಕಿ 7 ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದ್ದು, ಇವುಗಳಿಗೆ ಭೂಮಿ, ನೀರು ಮತ್ತು ವಿದ್ಯುತ್ ಪೂರೈಕೆ ಒದಗಿಸಲಾಗುವುದು, ಇವು ಬೃಹತ್ ಯೋಜನೆಗಳಾದ್ದರಿಂದ ಕಾರ್ಯಾರಂಭ ಮಾಡಲು 3 ರಿಂದ 4 ವರ್ಷಗಳು ಬೇಕಾಗುತ್ತದೆ.
ಎಫ್ಎಂಸಿಜಿ ಸಮಾವೇಶದಲ್ಲಾದ 16 ಒಡಂಬಡಿಕೆಗಳ ಪೈಕಿ 3 ಯೋಜನೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅನುಮೋದನೆ ಕೊಡಲಾಗಿದ್ದು, ಇವುಗಳಿಗೂ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ, ಮೇಲ್ಕಂಡ ಎರಡೂ ಬಗೆಯ ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ.
ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹಿಂದಿನ ಸರಕಾರವು 74.99 ಕೋಟಿ ರೂ. ವೆಚ್ಚ ಮಾಡಿದೆ. ಹುಬ್ಬಳ್ಳಿಯಲ್ಲಿ 2022ರ ನವೆಂಬರ್ನಲ್ಲಿ ನಡೆದ ಹೂಡಿಕೆದಾರರ ಸಮಾವೇಶಕ್ಕೆ12.23 ಲಕ್ಷ ರೂ.ಗಳನ್ನು ಸರಕಾರದ ವತಿಯಿಂದ ಖರ್ಚು ಮಾಡಲಾಗಿದೆ ಎಂದರು.
ಸ್ಥಳೀಯರಿಗೆ ಒಟ್ಟಾರೆ ಶೇ.70ರಷ್ಟು ಉದ್ಯೋಗ
ಜೊತೆಗೆ, ಸರಕಾರದ ನಿಯಮಾವಳಿಗಳ ಪ್ರಕಾರ ಈ ಉದ್ಯಮಗಳಲ್ಲಿ ಕನ್ನಡಿಗರಿಗೆ ‘ಡಿ’ ಗ್ರೂಪ್ ಹುದ್ದೆಗಳನ್ನು ಶೇಕಡ 100ರಷ್ಟು ಮತ್ತು ಒಟ್ಟಾರೆಯಾಗಿ ಶೇ.70ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕೊಡಬೇಕೆನ್ನುವ ನಿಯಮ ರೂಪಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.