ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ
ಬೆಳಗಾವಿ: ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಶರಣಗೌಡ ಬಯ್ಯಪುರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ರೈತರಿಗೆ ಜಮೀನಿಗೆ ಅನುಗುಣವಾಗಿ 2 ಸಾವಿರ ರೂ.ವರೆಗೆ ಬೆಳೆ ಪರಿಹಾರ ಹಣವನ್ನು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಈ ಸಂಬಂಧ ಮಾರ್ಗಸೂಚಿ ನಾಳೆ ಅಥವಾ ನಾಳಿದ್ದು ಬಿಡುಗಡೆ ಮಾಡುತ್ತೇವೆ ಎಂದರು.
ಹಲವು ಬೆಳೆ ಹಾನಿಗೊಳಗಾಗಿವೆ
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ಸಜ್ಜೆ, ತೃಣಧಾನ್ಯಗಳು, ತೊಗರಿ, ಹೆಸರು, ಉದ್ದು, ಹುರುಳಿ, ಅವರೆ, ಅಲಸಂದೆ, ಕಡಲೆ, ಸಾಸಿವೆ, ಸೂರ್ಯಕಾಂತಿ. ಸೋಯಾ, ಅವರೆ, ಹತ್ತಿ, ಕಬ್ಬು ಹಾಗೂ ತಂಬಾಕು ಬೆಳೆಗಳು ಹಾಳಾಗಿವೆ.
ಹಾನಿಯಾದ ಬೆಳೆ ಹಾನಿ ಪರಿಹಾರಕ್ಕಾಗಿ ಎನ್ಡಿಆರ್ಎಫ್ ನಿಯಮದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಆರ್ಥಿಕ ನೆರವನ್ನು ನಿರೀಕ್ಷಿಸಲಾಗಿದೆ ಎಂದರು.