ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷ: ಡಿಕೆಶಿ ಸಮರ್ಥನೆ
ಬೆಂಗಳೂರು: ಕರ್ನಾಟಕದ ನಂತರ ತೆಲಂಗಾಣದಲ್ಲಿ ಸರ್ಕಾರದ ಸಾರಿಗೆ ಸಂಸ್ಥೆಗಳ ಬಸ್ಸಿನಲ್ಲಿ ರಾಜ್ಯದೊಳಗೆ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಅನುಷ್ಠಾನಗೊಳಿಸಲಾಗಿದೆ.
ನಮ್ಮ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದೆ. ಕರ್ನಾಟಕದಲ್ಲಿ ಮೊದಲು ಗ್ಯಾರಂಟಿಯನ್ನು ಘೋಷಣೆ ಮಾಡಿದ್ದೆವು. ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದೆವು ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 110.67 ಕೋಟಿ ಮಹಿಳಾ ಪ್ರಯಾಣಿಕರು
ನಮ್ಮ ಶಕ್ತಿ ಯೋಜನೆಯನ್ನು ಕರ್ನಾಟಕದ ಮಹಿಳೆಯರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಜೂನ್ 11ರಿಂದ ಇಲ್ಲಿಯವರೆಗೆ ಡಿ.8ರವರೆಗೆ 110.67 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ.
ಈಗ ಇದೇ ರೀತಿಯಾಗಿ ತೆಲಂಗಾಣದಲ್ಲಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಇವತ್ತಿನಿಂದಲೇ ತೆಲಂಗಾಣ ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಇದರಿಂದ ನಮ್ಮದು ನುಡಿದಂತೆ ನಡೆಯುವ ಪಕ್ಷ ಎಂಬುದು ಸಾಬೀತಾದಂತೆ ಆಗಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಕರ್ನಾಟಕದಲ್ಲಿ ಈಗಾಗಲೇ ಶಕ್ತಿ ಯೋಜನೆಯಡಿ 110.67 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಇದರ ಮೌಲ್ಯ 2642.20 ಕೋಟಿ ರೂ. ಆಗಿದೆ. ಈಗ ತೆಲಂಗಾಣದಲ್ಲಿ ಸುಮಾರು ನಾಲ್ಕು ಕೋಟಿ ನಾಗರಿಕರಿದ್ದಾರೆ. ಅಲ್ಲಿಯ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ. ಈ ಕಾರಣಕ್ಕಾಗಿ ಅಲ್ಲಿನ ಸಿಎಂ ರೇವಂತ ರೆಡ್ಡಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ.
ನಮ್ಮ ಪಕ್ಷದ ಹೈಕಮಾಂಡ್ ನಮ್ಮ ರಾಜ್ಯದ ನಾಯಕರಿಗೆ ತೆಲಂಗಾಣದ ಚುನಾವಣಾ ಉಸ್ತುವಾರಿಯನ್ನು ನೀಡಿತ್ತು. ಕರ್ನಾಟಕದಲ್ಲಿ ಚುನಾವಣೆಗೆ ಮುನ್ನ ರಾಜ್ಯದ ಜನತೆಗೆ ಐದು ಗ್ಯಾರೆಂಟಿ ಯೋಜನೆಗಳ ಭರವಸೆ ನೀಡಲಾಗಿತ್ತು. ಅದರ ಮೇಲೆ ವಿಶ್ವಾಸವಿಟ್ಟು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರು ಎಂದು ಅವರು ತಿಳಿಸಿದರು.
ತೆಲಂಗಾಣದ ಸಮಗ್ರ ಅಭಿವೃದ್ಧಿ
ಹಾಗೆಯೇ ತೆಲಂಗಾಣ ಚುನಾವಣೆ ಪ್ರಚಾರದ ವೇಳೆ ಕೆಲ ಗ್ಯಾರಂಟಿ ಯೋಜನೆಗಳ ಭರವಸೆ ನೀಡಲಾಗಿತ್ತು. ಅದರಲ್ಲಿ ಮಹಿಳೆಯರಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಭರವಸೆಯೂ ಒಂದಾಗಿತ್ತು ಎಂದು ಹೇಳಿದ್ದಾರೆ.
ನಮ್ಮ ಮಾತಿನ ಮೇಲೆ ವಿಶ್ವಾಸವಿಟ್ಟು ಅಲ್ಲಿನ ಮಹಿಳೆಯರು ಬಹು ದೊಡ್ಡ ಬೆಂಬಲ ನೀಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಟ್ಟ ಮಾತಿನಂತೆ ತೆಲಂಗಾಣ ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ವನ್ನು ಜಾರಿಗೊಳಿಸಲಾಗಿದೆ.
ಕೊಟ್ಟ ಮಾತಿಗೆ ತಪ್ಪದೇ ನಡೆದುಕೊಂಡಿದ್ದೇವೆ. ತೆಲಂಗಾಣದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.