ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಮೇಲೆ ಅಪಾರ ನಂಬಿಕೆ ಇದೆ
ಬೆಳಗಾವಿ: ನಾನು ಹುಟ್ಟುತ್ತಲೇ ಕಾಂಗ್ರೆಸಿಗ, ಬೇರೆ ಪಕ್ಷಕ್ಕೆ ಹೋಗಲು ನಾನು ಹುಚ್ಚನಲ್ಲ, ನನಗೆ ನನ್ನದೇ ಆದ ಮೂಲ ಆದರ್ಶಗಳಿವೆ, ನನಗೆ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಅಪಾರವಾದ ನಂಬಿಕೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆ ನಂತರ ಪ್ರಭಾವಿ ಸಚಿವರೊಬ್ಬರು 50-60 ಶಾಸಕರ ಸಮೇತ ಬಿಜೆಪಿ ಸೇರುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾತನಾಡಿದ್ದಕ್ಕೆಲ್ಲ ನಾನು ಬಾಧ್ಯಸ್ಥನಲ್ಲ, ಅವರು ಏನಾದರೂ ಹೇಳಿಕೊಂಡು ತಿರುಗಲಿ, ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆಯಬೇಕು
ನಾನು ಜಾತಿ ಗಣತಿಗೆ ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ, ಸಮೀಕ್ಷೆ ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಅಭಿಮತ ಎಂದರು.
ಅನೇಕ ಶಾಸಕರು ಜಾತಿ ಗಣತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಮನೆ, ಮನೆಗೆ ತೆರಳಿ ಸಮೀಕ್ಷೆ ಮಾಡಿಲ್ಲ ಎಂಬ ದೂರುಗಳು ಬಂದಿವೆ.
ಅಲ್ಪಸಂಖ್ಯಾತರು, ಪರಿಶಿಷ್ಟರು ಸೇರಿದಂತೆ ಎಲ್ಲರೂ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಹಕ್ಕು ಹಾಗೂ ಅನುದಾನ ಕೇಳುತ್ತಾರೆ, ಜಾತಿ ಗಣತಿ ವೈಜ್ಞಾನಿಕವಾಗಿ ಆಗಿದೆಯೇ ಎಂಬ ಬಗ್ಗೆ ಸ್ಪಷ್ಟೀಕರಣ ಕೇಳಿದ್ದೇವೆ.
ಸಮಾಜದ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಕಾಂಗ್ರೆಸ್ ಪಕ್ಷದ ಬದ್ಧತೆಗೆ ಬೆಂಬಲವಾಗಿ ನಿಲ್ಲುತ್ತೇವೆ, ಕೇಂದ್ರ ಸರಕಾರದ ವರ್ಗೀಕರಣದ ಪ್ರಕಾರ ನಾನೂ ಸಹಾ ಇತರೆ ಹಿಂದುಳಿದ ವರ್ಗದ ಸಮುದಾಯದಕ್ಕೆ ಸೇರುತ್ತೇನೆ, ಆದರೆ, ಎಲ್ಲಾ ವರ್ಗದ ಜನರನ್ನು ಸಮಾನವಾಗಿ ನೋಡಬೇಕು ಎಂದರು.
ವರದಿಗೆ ಕಾರ್ಯದರ್ಶಿಗಳ ಸಹಿ ಇಲ್ಲವೆಂಬ ಮಾಹಿತಿ ಪಡೆದಿದ್ದೇನೆ
ಜಾತಿ ಗಣತಿಯ ಕೆಲವು ದಾಖಲೆಗಳು ಕಾಣೆಯಾಗಿರುವ ವಿಚಾರ ನನಗೆ ಗೊತ್ತಿಲ್ಲ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಮಾತನಾಡಿದ್ದು, ವರದಿಗೆ ಕಾರ್ಯದರ್ಶಿಗಳ ಸಹಿ ಇಲ್ಲವೆಂಬ ಮಾಹಿತಿ ಪಡೆದಿದ್ದೇನೆ, ಕಾರ್ಯದರ್ಶಿಗಳ ಸಹಿ ಇಲ್ಲದೇ ಅದು ಹೇಗೆ ಸಿಂಧುವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದರು.