ಹೊಸ ವರ್ಷದ ಮುನ್ನಾ ದಿನ ಎಂ ಎಸ್ ಐ ಎಲ್ ದಾಖಲೆ ವಹಿವಾಟು
ಬೆಂಗಳೂರು: ರಾಜ್ಯದಲ್ಲಿರುವ 1031 ಎಂ ಎಸ್ ಐ ಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ 2023ರ ಕೊನೆಯ ದಿನವಾದ ಡಿ.31ರಂದು 18.85 ಕೋಟಿ ರೂ. ಮೊತ್ತದ ದಾಖಲೆಯ ಮದ್ಯ ಮಾರಾಟವಾಗಿದೆ ಎಂದು ಎಂ ಎಸ್ ಐ ಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಇದು ಸುಮಾರು 4.34 ಕೋಟಿ ರೂ. ಹೆಚ್ಚಳವಾಗಿದೆ. 2022ರ ಡಿ. 31ರಂದು 14.51 ಕೋಟಿ ರೂ. ಮೊತ್ತದ ಮದ್ಯ ಮಾರಾಟವಾಗಿತ್ತು ಎಂದು ಅವರು ಹೇಳಿದ್ದಾರೆ.
ರಾಯಚೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಅತ್ಯಂತ ಹೆಚ್ಚು, ಅಂದರೆ 11.66 ಲಕ್ಷ ರೂಪಾಯಿಗಳ ಮದ್ಯ ಮಾರಾಟವಾಗಿದ್ದರೆ, ಅದೇ ನಗರದ ಗಂಝ್ ರಸ್ತೆಯ ಮಳಿಗೆಯಲ್ಲಿ 9.96 ಲಕ್ಷ ರೂ. ಮದ್ಯ ಬಿಕರಿಯಾಗಿ ಎರಡನೇ ಸ್ಥಾನದಲ್ಲಿದೆ.
ಜಿಲ್ಲಾವಾರು ಮಾರಾಟದಲ್ಲಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ, ಅಂದರೆ 1.82 ಕೋಟಿ ರೂಪಾಯಿಯ ಮದ್ಯ ಮಾರಾಟ ಕಂಡಿದೆ. ಕಳೆದ ವರ್ಷದ ಇದೇ ದಿನ ಈ ಜಿಲ್ಲೆಯಲ್ಲಿ 1.35 ಕೋಟಿ ರೂ .ನ ಮದ್ಯ ಮಾರಾಟವಾಗಿತ್ತು.
ಉನ್ನತ ದರ್ಜೆಗೇರಿಸಿ ಜ.1ರಂದು ಉದ್ಘಾಟನೆಗೊಂಡ ಬೆಂಗಳೂರು ಬಸವೇಶ್ವರನಗರದ ಎಂ ಎಸ್ ಐ ಎಲ್ ಬೋಟಿಕ್ ನಲ್ಲಿ ಮದ್ಯ ಮಾರಾಟದ ಮೊತ್ತ 3.5 ಲಕ್ಷ ರೂ. ಇಲ್ಲಿ ಕಳೆದ ವರ್ಷದ ಇದೇ ದಿವಸ ಈ ಮಳಿಗೆಯಲ್ಲಿ 2.59 ಲಕ್ಷ ರೂ. ಮದ್ಯ ಮಾರಾಟವಾಗಿತ್ತು ಎಂದು ಅವರು ಹೇಳಿದ್ದಾರೆ.
ಉಳಿದ ದಿನಗಳಂದು ರಾಜ್ಯದ ಎಲ್ಲಾ ಎಂಎಸ್ಐಎಲ್ ಮಳಿಗೆಗಳಿಂದ ಆಗುವ ಮದ್ಯ ಮಾರಾಟದ ವಹಿವಾಟು 8 ಕೋಟಿ ರೂಪಾಯಿಯಷ್ಟಿರುತ್ತದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಇದು ರೂ 18.8 ಕೋಟಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.


