ರೈತರು ತಿರುಗಿ ಬಿದ್ದರೆ ಸರ್ಕಾರ ಇರುವುದಿಲ್ಲ
ಬೆಂಗಳೂರು: ರಾಜ್ಯ ಸರ್ಕಾರ ಬರ ಪರಿಹಾರ ನೀಡಲು ಆಧಾರ್ ಜೋಡಣೆಯ ಕುಂಟುನೆಪ ಹೇಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಫ್ರುಟ್ ಸಾಫ್ಟವೇರ್ನಲ್ಲಿ 69 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದೆ, ಮುಖ್ಯಮಂತ್ರಿ ಸರ್ಕಾರದ ಆರ್ಥಿಕ ದುಸ್ಥಿತಿ ಮರೆ ಮಾಚಲು ತಾಂತ್ರಿಕ ಕಾರಣ ನೆಪ ಹೇಳುತ್ತಿದ್ದಾರೆ, ಸರ್ಕಾರ ತಕ್ಷಣ ರೈತರ ಖಾತೆಗಳಿಗೆ 2,000 ರೂ. ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಆರು ತಿಂಗಳಾದರೂ ಕೆಲಸ ಮಾಡದ ಸರ್ಕಾರ
ರಾಜ್ಯದಲ್ಲಿ ಬಹುತೇಕ ತಾಲ್ಲೂಕುಗಳು ಬರ ಪೀಡಿತ ಎಂದು ಘೊಷಣೆಯಾಗಿವೆ, ಮುಂಗಾರು, ಹಿಂಗಾರು ವಿಫಲವಾಗಿದೆ, ಸರ್ಕಾರ ಬರ ನಿರ್ವಹಣೆಗೆ ಹಣ ಬಿಡುಗಡೆ ಮಾಡಿಲ್ಲ, ಕಾಮಗಾರಿ ಆರಂಭಿಸಿಲ್ಲ, ಆರು ತಿಂಗಳು ಕಳೆದರೂ ಯಾವುದೇ ಕೆಲಸ ಮಾಡದ ಸಿದ್ದರಾಮಯ್ಯ ಸರ್ಕಾರ ಆಧಾರ ಜೋಡಣೆಯ ನೆಪ ಹೇಳಿ ರೈತರಿಗೆ ವಂಚನೆ ಮಾಡುತ್ತಿದೆ.
ಬರಗಾಲದ ಹಿನ್ನೆಲೆಯಲ್ಲಿ ಈ ವರ್ಷ ಆಹಾರ ಉತ್ಪಾದನೆ ಕಡೆಮೆಯಾಗಲಿದೆ ಎಂಬುದಾಗಿ ಕೃಷಿ ಇಲಾಖೆ ವರದಿ ಹೇಳಿದೆ, ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ, ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಾರೆ, ಈ ಹಿಂದೆ ಕೇಂದ್ರದ ನೆರವಿಗೆ ಕಾಯದೇ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದವು.
ಖಾತೆಗೆ ತಕ್ಷಣ 2,000 ರೂ. ಹಾಕಿ
ಬೆಳಗಾವಿ ಅಧಿವೇಶನಕ್ಕೆ ಮೊದಲು ರೈತರ ಬ್ಯಾಂಕ್ ಖಾತೆಗೆ ಪ್ರತಿ ಹೆಕ್ಟೇರ್ಗೆ 2,000 ರೂ. ಹಾಕುವುದಾಗಿ ಹೇಳಿದ್ದಿರಿ, ಈಗ ಆಧಾರ್ ಲಿಂಕ್ ಮಾಡುವುದಾಗಿ ಹೇಳುತ್ತಿದ್ದೀರಿ, ರೈತರು ತಿರುಗಿ ಬಿದ್ದರೆ ಯಾವ ಸರ್ಕಾರವೂ ಇರುವುದಿಲ್ಲ, ತಕ್ಷಣ ಹಣ ಹಾಕಿ ಎಂದು ಎಚ್ಚರಿಸಿದರು.