ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೂ ಕ್ರಮ
ಬೆಂಗಳೂರು: ಎಚ್.ಎನ್ವ್ಯಾಲಿ ಹಾಗೂ ಕೆ.ಸಿ ವ್ಯಾಲಿ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿರುವ ಎರಡನೇ ಹಂತದ ಸಂಸ್ಕರಿಸಿದ ನೀರನ್ನು ನೇರವಾಗಿ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಈ ಎರಡೂ ವ್ಯಾಲಿಗಳ ಏತ ನೀರಾವರಿ ಯೋಜನೆಯ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಬಯಲುಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಸಂಸ್ಕರಿಸಿದ ನೀರಿನ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದೆ.
ಕೊಳೆವೆ ಬಾವಿಗಳ ಮೂಲಕ ಮಾತ್ರ ನೀರು ಹರಿಸಿ
ಈ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು, ಜನರು ಕೊಳೆವೆ ಬಾವಿಗಳ ಮೂಲಕ ನೀರನ್ನು ತಮ್ಮ ಬೆಳೆಗಳಿಗೆ ಉಪಯೋಗಿಸಬಹುದಾಗಿದೆ, ಸಂಸ್ಕರಿಸಿದ ನೀರನ್ನು ನೇರವಾಗಿ ಕುಡಿಯಲು ಹಾಗೂ ಕೃಷಿಗೆ ಬಳಸುವುದನ್ನು ನಿಷೇಧಿಸಲಾಗಿದ್ದು, ಕೆಲವರು ನೀರನ್ನು ನೇರವಾಗಿ ತಮ್ಮ ಬೆಳೆಗಳಿಗೆ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಇಂತಹ ಚಟುವಟಿಕೆಗಳಿಂದ ಯೋಜನೆಯ ಮೂಲ ಉದ್ದೇಶಕ್ಕೆ ತೊಂದರೆಯಾಗುತ್ತಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಂಸ್ಕರಿಸಿದ ನೀರನ್ನು ಜನರು ನೇರವಾಗಿ ತಮ್ಮ ಜಮೀನುಗಳಿಗೆ ಪಂಪ್ ಮಾಡುವುದು ಹಾಗೂ ಹರಿಸುವುದನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಆಗಾಗ್ಗೆ ಪರಿಶೀಲನೆ ನಡೆಸಬೇಕು. ನೀರು ಬಳಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಈ ಕಾರ್ಯದಲ್ಲಿ ವಿಫಲವಾಗುವ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಸಿದ್ದಾರೆ.