ಭರವಸೆಯಂತೆ ಐದೂ ಗ್ಯಾರಂಟಿ ಯೋಜನೆ ಜಾರಿ
ಬೆಂಗಳೂರು: ನುಡಿದಂತೆ ನಡೆಯುತ್ತೇವೆ ಎನ್ನುವುದು ಜನತೆಗೆ ಕಾಂಗ್ರೆಸ್ ನೀಡಿರುವ ವಚನ, ನಾವು ಉಳಿದವರಂತೆ ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಎಲ್ಲಾ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದಿದ್ದಾರೆ.
ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು ಜನರಿಂದ ಆಯ್ಕೆಯಾದ ಒಂದು ಸರ್ಕಾರದ ಕರ್ತವ್ಯ, ಈ ಯೋಜನೆಗಳು ದುರುಪಯೋಗ ಆಗದಂತೆ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿರುವುದು ಫಲಾನುಭವಿಗಳ ಕರ್ತವ್ಯ.
ತಪ್ಪು ಕಲ್ಪನೆ ಬೇಡ
ಜನರ ತೆರಿಗೆ ಹಣ, ಜನರ ಕಲ್ಯಾಣ ಕಾರ್ಯಕ್ರಮಗಳು, ಇವು ಉಚಿತ ಯೋಜನೆಗಳು ಎಂಬ ತಪ್ಪು ಕಲ್ಪನೆ ಬೇಡ, ಗ್ಯಾರಂಟಿಗಳ ಪ್ರತಿ ಪೈಸೆಯೂ ಫಲಾನುಭವಿಗಳ ಬದುಕಿಗೆ ಸದುಪಯೋಗವಾಗಬೇಕು.
ಚುನಾವಣಾ ಪ್ರಣಾಳಿಕೆಯನ್ನು, ಚುನಾವಣಾ ಪ್ರಚಾರಕ್ಕೆ ಸೀಮಿತಗೊಳಿಸದೆ ಕಾರ್ಯರೂಪಕ್ಕೆ ತಂದು, ಜನರ ಬದುಕಲ್ಲಿ ಅವುಗಳ ಪ್ರತಿಫಲ ಕಾಣಬೇಕು ಎಂಬುದು ಸರ್ಕಾರದ ಆಶಯ, ಸರ್ಕಾರದ ಸದಾಶಯಕ್ಕೆ ಎಲ್ಲರ ಬೆಂಬಲವಿರಲಿ ಎಂದು ಮನವಿ ಮಾಡಿದ್ದಾರೆ.