ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ
ಬೆಂಗಳೂರು:ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಎಫ್ಎಸ್ಎಲ್ನವರು ವೈಜ್ಞಾನಿಕ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪೋಸ್ಟಿಂಗ್ ಮಾಡಿದ್ದಾರೆ, ’ನಾಸೀರ್ ಸಾಬ್ ಜಿಂದಾಬಾದ್’ ಎಂದು ಹೇಳಲಾಗಿದೆ ಅಂತ ಕೆಲವರು ಹೇಳುತ್ತಿದ್ದಾರೆ, ಇನ್ನು ಕೆಲವರು ’ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ರು’ ಅಂತ ಹೇಳಲಾಗುತ್ತಿದೆ, ಈ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ ಎಂದರು.
ವಿಡಿಯೊ ತುಣುಕುಗಳ ಸಂಗ್ರಹ
ಈಗಾಗಲೇ ಎಫ್ಎಸ್ಎಲ್ನವರು ಪರೀಶೀಲನೆ ಕೈಗೊಂಡಿದ್ದಾರೆ, ಎಲ್ಲ ವಿಡಿಯೊ ತುಣುಕುಗಳನ್ನು ಸಂಗ್ರಹಿಸುತ್ತಿದ್ದಾರೆ, ಅಧಿಕೃತವಾಗಿ ಯಾವ ಸುದ್ದಿ ವಾಹಿನಿಯಲ್ಲಿ ಮೊದಲು ಪ್ರಸಾರವಾದ ವಿಡಿಯೋಗಳನ್ನು ಎಫ್ಎಸ್ಎಲ್ನವರು ಪಡೆಯಲಿದ್ದಾರೆ, ವೈಜ್ಞಾನಿಕವಾಗಿ ಖಚಿತವಾದರೆ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಬಿಜೆಪಿಯವರು ಕೊಟ್ಟಿರುವ ದೂರನ್ನು ಸುಮೋಟೊ ಜತೆ ಸೇರಿಸಲಾಗುವುದು ಎಂದರು.
ಘೋಷಣೆ ಕೂಗಿದರೂ ಎನ್ನಲಾದ ಸ್ಥಳದಲ್ಲಿ ಯಾರಿದ್ದರು ಎನ್ನುವುದನ್ನು ಗುರುತಿಸಿ, ಅವರ ವಿಚಾರಣೆ ನಡೆಸಲಾಗುತ್ತದೆ, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಖಚಿತವಾದರೆ ತಪ್ಪಿತಸ್ಥನ ವಿರುದ್ಧ ಕಾನೂನು ರೀತ್ಯ ಏನೇನು ಕ್ರಮ ಜರುಗಿಸಬೇಕೊ ಅದು ಆಗುತ್ತದೆ, ಯಾವುದೇ ಕಾರಣಕ್ಕೂ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯಾರೋ ಒಬ್ಬ ಮಾಡಿದನೆಂಬುದನ್ನು ಕಾಂಗ್ರೆಸ್ ಪಕ್ಷಕ್ಕೆ ತಳುಕು ಹಾಕುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಬಿಜೆಪಿ ಮೊದಲಿನಿಂದಲೂ ಹೇಳುತ್ತಲೇ ಇದೆ, ಕಾಂಗ್ರೆಸ್ ಏನು ತಪ್ಪು ಮಾಡಿದೆ, ಬಿಜೆಪಿ ಪ್ರತಿಭಟನೆ ತಪ್ಪು ಅಂತ ಹೇಳುವುದಿಲ್ಲ, ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲಿ ಎಂದರು.