ಬೆಂಗಳೂರು:ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರಧಾನ್ಯ ವಿತರಿಸುತ್ತಿರುವ ಪಡಿತರ ವಿತರಕರಿಗೆ ಪ್ರತಿ ಕೆ.ಜಿ. ಅಕ್ಕಿಯ ಕಮಿಷನ್ ಮೊತ್ತನ್ನು ಒಂದೂವರೆ ರೂಪಾಯಿಗೆ ಹೆಚ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಮಹತ್ವದ ಘೋಷಣೆ ಮಾಡಿದರು.
ಅರಮನೆ ಮೈದಾನದಲ್ಲಿ ಅನ್ನಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಗಳಿಗೆಯೇ ಅನ್ನಭಾಗ್ಯ ಕಾರ್ಯಕ್ರಮ ಜಾರಿಗೆ ತಂದೆ, 2013 ರ ಬಸವ ಜಯಂತಿಯ ದಿನವೇ ಜಾರಿಗೆ ಬಂದಿರುವ ಅನ್ನಭಾಗ್ಯ ಯೋಜನೆ ಬಸವಣ್ಣನವರ ದಾಸೋಹದಿಂದ ಪ್ರೇರಿತವಾಗಿರುವುದು ಎಂದು ನೆನಪಿಸಿದರು.
ಕರ್ನಾಟಕ ಯಶಸ್ವಿ
ಹಸಿವಿನ ಜೊತೆಗೆ ದೇಶವನ್ನು ಅನಕ್ಷರತೆ, ಅನಾರೋಗ್ಯ ಮತ್ತು ನಿರುದ್ಯೋಗ ಮುಕ್ತ ಮಾಡುವುದೇ ಕಾಂಗ್ರೆಸ್ ಗುರಿ, ನಮ್ಮ ಹಿಂದಿನ ಆಡಳಿತ ಕಾಲದಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಕಾರ್ಯಕ್ರಮಗಳೆಲ್ಲವೂ ಈ ಗುರಿಯೆಡೆಗೆ ಕರ್ನಾಟಕವನ್ನು ಕೊಂಡೊಯ್ಯುವ ಪ್ರಯತ್ನದಲ್ಲಿ ಯಶಸ್ವಿ ಆಗಿದ್ದೇವೆ ಎಂದರು.
ಗ್ಯಾರಂಟಿ ಯೋಜನೆಗಳ ಗುರಿ ಕೂಡಾ ರಾಜ್ಯವನ್ನು ಹಸಿವು, ಅನಾರೋಗ್ಯ, ಅನಕ್ಷರತೆ, ನಿರುದ್ಯೋಗ ಮುಕ್ತ ಮಾಡುವುದೇ ಆಗಿದೆ.
ಕರ್ನಾಟಕದ ಜನತೆಗೆ ಅಕ್ಕಿ ಕೊಡಲಿಲ್ಲ
ನಾವು ತಲಾ 10 ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿ ಪ್ರತಿ ಕೆಜಿಗೆ 34 ರೂ.ನಂತೆ ಹಣ ಕೊಡುತ್ತಿದ್ದೇವೆ, ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದೆವು, ಆದರೂ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಅಕ್ಕಿ ಕೊಡಲಿಲ್ಲ.
ನಮ್ಮ ಯೋಜನೆಗಳಲ್ಲಿ ರಾಜಕೀಯ ಲಾಭದ ಉದ್ದೇಶ ಇಲ್ಲ, ಯೋಜನೆಗಳ ಉದ್ದೇಶ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆ, ರಾಜ್ಯದ ಯಾವುದೇ ಮನೆಯಲ್ಲಿ ಹಸಿವು, ಅನಾರೋಗ್ಯ, ಅನಕ್ಷರತೆ ಮತ್ತು ನಿರುದ್ಯೋಗದಿಂದ ಬಳಲುವವರು ಇರದಂತೆ ನೋಡಿಕೊಳ್ಳುವುದೇ ಸರ್ಕಾರದ ಆಶಯ ಮತ್ತು ಬದ್ಧತೆಯಾಗಿದೆ.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು, ಇವು ಕಾಂಗ್ರೆಸ್ ಜಾರಿಗೆ ತಂದಿದ್ದ ಹಸಿವು ಮುಕ್ತ ಭಾರತದ ಕಾರ್ಯಕ್ರಮಗಳು ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಾರೆ, ಕಾಂಗ್ರೆಸ್ ಹಸಿವು ಮುಕ್ತ ನಾಡನ್ನು, ಹಸಿವು ಮುಕ್ತ ದೇಶವನ್ನು ನಿರ್ಮಿಸಲು ಹೊರಟಿದೆ ಎಂದರು.
ಅನ್ನದಾತ ದುಡಿದರೆ ದೇಶ ಬದುಕುತ್ತೆ
ಅನ್ನಭಾಗ್ಯ ಸೇರಿದಂತೆ ಬಡವರು, ಮಧ್ಯಮ ವರ್ಗದವರಿಗೆ ಕೊಟ್ಟ ಭಾಗ್ಯಗಳನ್ನು ವ್ಯಂಗ್ಯ ಮಾಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ದುರಂತ, ಇಂಥಾ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬೇಡಿ, ಅನ್ನದಾತರು ದುಡಿದರೆ ದೇಶ ಬದುಕುತ್ತದೆ ಎಂದು ಜನರಲ್ಲಿ ಮನವಿ ಮಾಡಿದರು.
ಬಿಜೆಪಿ ಬಡವರ, ದುಡಿಯುವವರ, ಶ್ರಮಿಕರು, ದಲಿತರು, ಶೂದ್ರರು ಮತ್ತು ಹಿಂದುಳಿದವರ ಪರವಾಗಿ ಇದ್ದಿದ್ದರೆ ಅಕ್ಕಿ ಕೊಡುತ್ತಿತ್ತು, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಹಸಿವು ಮುಕ್ತ ದೇಶ ಬೇಕಾಗಿಲ್ಲ, ನಿಮ್ಮ ಪರವಾಗಿ ಇರುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ, ನಿಮ್ಮ ಹೃದಯದ ಮಾತು ಕೇಳಿ ಮತ ಚಲಾಯಿಸಿ ಎಂದು ಮುಖ್ಯಮಂತ್ರಿ ಕರೆ ನೀಡಿದರು.