ಬೆಂಗಳೂರು:ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ಮೇ 9 ಅಥವಾ 10ರಂದು ಬಿಡುಗಡೆ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸಿದ್ಧತೆ ನಡೆಸಿದೆ.
ಮಾರ್ಚ್ 25ರಿಂದ ಏಪ್ರಿಲ್ 6 ರವರೆಗೆ ರಾಜ್ಯದ 2,570 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ರೀ ಎಕ್ಸಾಮ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಮೌಲ್ಯಮಾಪನ ಪೂರ್ಣ
ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಈಗಾಗಲೇ ಸಂಪೂರ್ಣಗೊಂಡಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಫಲಿತಾಂಶ ಬಿಡುಗಡೆ ತಡವಾಗಿತ್ತು.
ಮಂಗಳವಾರ ಎರಡನೇ ಹಂತದ ಮತದಾನ ಮುಗಿಲಿರುವ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸಿದ್ಧತೆ ಮಾಡಿಕೊಂಡಿದೆ.
ಫಲಿತಾಂಶವನ್ನು ಕರ್ನಾಟಕ ಶಾಲೆ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್ಸೈಟ್ನಲ್ಲಿ ನೋಡಬಹುದಾಗಿದೆ, ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ವೆಬ್ಸೈಟ್ನಲ್ಲೂ ಫಲಿತಾಂಶ
kseab.karnataka.gov.in ಗೆ ಭೇಟಿ ನೀಡಬಹುದು, ಅಲ್ಲದೆ, karresults.nic.in ವೆಬ್ಸೈಟ್ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಮುಖ ಹಂತವಾಗಿರುವುದರಿಂದ ಸಹಜವಾಗಿ ಕಾತರ ಹೆಚ್ಚಾಗಿದೆ.