ಮೈಸೂರು:ಕಾಂಗ್ರೆಸ್ನಲ್ಲಿ ಒಳಜಗಳ ಇಲ್ಲ, ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಜಗಳವಾಗಿ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ರಾಜಕೀಯ ಪ್ರೇರಿತ ಎಂದರು.
ಮೈತ್ರಿ ಪರಿಣಾಮ ಬೀರುವುದಿಲ್ಲ
ಬಿಜೆಪಿ-ಜೆಡಿಎಸ್ ಮೈತ್ರಿ ಯಾವುದೇ ಪರಿಣಾಮ ಬೀರುವುದಿಲ್ಲ, ಪರಿಷತ್ ಚುನಾವಣೆಯಲ್ಲೂ ಪಕ್ಷಕ್ಕೆ ಉತ್ತಮ ವಾತಾವರಣವಿದೆ, ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರು ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು, ಇದರಿಂದ ಮತದಾರರ ಭೇಟಿಗೆ ಅವಕಾಶ ದೊರೆಯಿತು.
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ರಾಜಕೀಯವಾಗಿ ಪ್ರಬುದ್ಧರಾಗಿದ್ದಾರೆ, ಯಾವುದು ಸರಿ, ಯಾವುದು ತಪ್ಪು ಎನ್ನುವ ಅರಿವು ಹೊಂದಿದ್ದಾರೆ. ಕೇಂದ್ರ ಹಾಗೂ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ತುಲನೆ ಮಾಡುವ ಶಕ್ತಿ ಮತದಾರರಿಗಿದೆ.
ಹಿಟ್ ಅಂಡ್ ರನ್ ಕೇಸ್
ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಪೆನ್ಡ್ರೈವ್ ಇದ್ದು, ತನಿಖೆ ಮಾಡಿಸುವ ತಾಕತ್ತು ಸರ್ಕಾರಕ್ಕಿದ್ದರೆ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಹಿಟ್ ಅಂಡ್ ರನ್ ಕೇಸ್ ಎಂದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಉರುಳಿಸುವ ಮಾತನ್ನಾಡುವ ಮಹಾರಾಷ್ಟ್ರ ಮುಖ್ಯಮಂತ್ರಿ ಮೊದಲು ತಮ್ಮ ಸರ್ಕಾರ ಉಳಿಸಿಕೊಳ್ಳಲಿ ಎಂದರು.