ಶಾಶ್ವತ ಪರಿಹಾರ ಆಗಬೇಕು, ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀರ
ಬೆಂಗಳೂರು:ನಗರದ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಮೇಲುಸೇತುವೆ ರಸ್ತೆ ಹಾಗೂ ಮೆಟ್ರೊ ಮಾರ್ಗಗಳನ್ನು ಒಂದರ ಮೇಲೊಂದು ನಿರ್ಮಿಸುವ ’ಡಬ್ಬಲ್ ಡೆಕ್ಕರ್’ ವ್ಯವಸ್ಥೆಯನ್ನು ಬೆಂಗಳೂರಿನ ಇತರ ಭಾಗಗಳಲ್ಲೂ ಅಳವಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಈ ವರ್ಷದಲ್ಲೇ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು, ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀರ ಎಂದು ಚೀಫ್ ಎಂಜಿನಿಯರ್ಗೆ ಮುಖ್ಯಮಂತ್ರಿ ಎಚ್ಚರಿಸಿದರು.
ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಮೂರು ಕಿ.ಮೀ. ಉದ್ದದ ಬಿಟಿಎಂ ಮೇಲುಸೇತುವೆ ರಸ್ತೆ ಹಾಗೂ ಮೆಟ್ರೋ ಮಾರ್ಗಗಳೆರಡೂ ಒಂದರ ಮೇಲೊಂದು ಇರುವ ಡಬಲ್ ಡೆಕ್ಕರ್ ಸೇತುವೆ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದ ಅವರು, ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರ ದಟ್ಟಣೆಗೆ ಪರಿಹಾರ ರೂಪವಾಗಿ ಈ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಎಂದರು.
ಇದಲ್ಲದೆ, ಸುಗಮ ಸಂಚಾರಕ್ಕಾಗಿ, ಬಿಟಿಎಂನಿಂದ ಬನಶಂಕರಿ ಕಡೆಗೆ ಹೋಗುವಾಗ, ರಾಘವೇಂದ್ರಸ್ವಾಮಿ ಟೆಂಪಲ್ ಸರ್ಕಲ್, ಜಯನಗರ 5ನೇ ಬ್ಲಾಕ್ನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಬೇಡಿಕೆ ಇದ್ದು, ಅಂಡರ್ ಪಾಸ್ ನಿರ್ಮಿಸಲು ಸೂಚಿಸಿದರು.
ಹೆಚ್ಚುವರಿ ಕಾಲುವೆ ಅಗತ್ಯ
ಮಳೆಗಾಲದಲ್ಲಿ ಮಳೆ ನೀರಿನಿಂದ ರಾಜಕಾಲುವೆಗಳಲ್ಲಿ ಪ್ರವಾಹ ಉಂಟಾಗುತ್ತಿದೆ, ಫ್ಲೈಓವರ್ ನಿರ್ಮಿಸಿದ್ದರಿಂದ ರಾಜಕಾಲುವೆಯ ವಿಸ್ತಾರ ಕಡಿಮೆ ಆಗಿದೆ, ನೀರು ಸರಾಗವಾಗಿ ಹರಿಯಲು ಹೆಚ್ಚುವರಿ ಕಾಲುವೆ ಅಗತ್ಯವಿದೆ.
ಏಳು ಕೋಟಿ ರೂ. ವೆಚ್ಚದ ಕಾಮಗಾರಿ ಅನುಮೋದನೆಯಾಗಿದ್ದು, ಹಣಕಾಸು ಹಾಗೂ ಕಂದಾಯ ಇಲಾಖೆ ಅನುಮೋದನೆ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಿವರಿಸಿದರು.
ಹಣಕಾಸು ಹಾಗೂ ಕಂದಾಯ ಇಲಾಖೆ ಅನುಮೋದನೆ ನೀಡಿದ, ಕೂಡಲೇ ಬಿಬಿಎಂಪಿ ಕಾಮಗಾರಿ ಕೈಗೆತ್ತಿಕೊಳ್ಳಲು ಅನುವು ಮಾಡುವಂತೆ ಎರಡೂ ಇಲಾಖೆಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.
ಪ್ರವಾಹ ನಿಯಂತ್ರಣ ಕಾಮಗಾರಿ
ಗಾಳಿ ಆಂಜನೇಯ ದೇವಸ್ಥಾನ ಸಮೀಪದ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದ್ದು, ಸಮಾನಾಂತರವಾಗಿ ಇನ್ನೊಂದು ಕಾಲುವೆ ನಿರ್ಮಿಸುವುದರಿಂದ ಪ್ರವಾಹ ತಗ್ಗಿಸಬಹುದು ಎಂಬ ಮುಖ್ಯ ಆಯುಕ್ತರ ವಿವರಣೆಗೆ, ಪ್ರವಾಹ ನಿಯಂತ್ರಣ ಕಾಮಗಾರಿಗೆ 11.5 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದ್ದು, ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದರು.
ರಾಜಕಾಲುವೆಗೆ ಸಾರ್ವಜನಿಕರು ಕಸ ಎಸೆಯುವುದನ್ನು ತಡೆಗಟ್ಟಲು ಕ್ರಮ ವಹಿಸಬೇಕು, ಮಳೆಗಾಲದೊಳಗೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಒಣಗಿದ ಮರಗಳ ತೆರವು
ರಸ್ತೆ ಬದಿ ಒಣ ಮರಗಳು ಬಿದ್ದಿರುವುದನ್ನು ಕಂಡ ಮುಖ್ಯಮಂತ್ರಿ, ಒಣಗಿದ ಮರ ಯಾಕೆ ಬಿಟ್ಕೊಂಡಿದ್ದೀರಿ, ಅನಾಹುತ ಆಗ್ಲಿ ಅಂತನಾ, ರಸ್ತೆ ಬದಿಯ ಒಣಗಿದ ಮರಗಳನ್ನು ತೆರವುಗೊಳಿಸಬೇಕು.
ನಗರದಾದ್ಯಂತ ಇರುವ ಒಣಮರ, ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು, ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬೇಕು, ಪದ್ಮನಾಭನಗರ ಫ್ಲೈಓವರ್ ಬಳಿ ಹಾನಿಯಾಗಿರುವ ಫುಟ್ಪಾತ್ ಶೀರ್ಘವಾಗಿ ದುರಸ್ತಿಗೊಳಿಸಲು ಹಾಗೂ ಮೆಟ್ರೋ ಮತ್ತು ಫ್ಲೈ ಓವರ್ ಕಾಮಗಾರಿಯಿಂದಾಗಿ ಅಲ್ಲಲ್ಲಿ ಹಾಕಲಾಗಿದ್ದ ಅಶೇಷಗಳನ್ನು ಆಗಿಂದಾಗಲೇ ತೆರವುಗೊಳಿಸುವಂತೆ ಸೂಚಿಸಿದರು.