ಬೆಂಗಳೂರು:ಪ್ರಜ್ವಲ್ ಅವರನ್ನು ವಿದೇಶಕ್ಕೆ ದೇವೇಗೌಡರೇ ಕಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿರುವ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಅವರು, ವಿದೇಶಕ್ಕೆ ನಿಮ್ಮ ಮಗನನ್ನು ಸಾಯಲಿ ಅಂತಲೇ ಕಳಿಸಿದಿರಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೇ ಆಗಲಿ ನೋವು ನೋವೇ, ನಿಮ್ಮ ಕುಟುಂಬದಲ್ಲೂ ಒಂದು ಘಟನೆ ನಡೆದಿದೆ, ಆಗ ನಿಮ್ಮ ಮಗನನ್ನು ನೀವೇ ಕಳಿಸಿದಿರಾ, ಅವರ ಸಾವಿಗೆ ನೀವೇ ಕಾರಣರಾ ಎಂದು ಹರಿಹಾಯ್ದರು.
ಪಾಸ್ಪೋರ್ಟ್ ರದ್ದು ತಕ್ಷಣಕ್ಕೆ ಸಾಧ್ಯವಿಲ್ಲ
ರಾಜತಾಂತ್ರಿಕ ಪಾಸ್ಪೋರ್ಟ್ ಬಗ್ಗೆ ಇವರಿಗೆ ಕಾನೂನಿನ ತಿಳಿವಳಿಕೆಯೇ ಇಲ್ಲ, ಪ್ರಜ್ವಲ್ಗೆ ವಾಪಸ್ ಕರೆದುಕೊಂಡು ಬರಲು ಪತ್ರ ಬರೆದಿದ್ದಾರೆ, ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಬೇಕು ಎಂದು ಕೇಳಿದ್ದಾರೆ, ತಕ್ಷಣಕ್ಕೆ ಅದು ಸಾಧ್ಯವಿಲ್ಲ.
ಇದೆಲ್ಲಾ ಪ್ರಕ್ರಿಯೆ ಸಾಕಷ್ಟು ದಿನ ಆಗಬಹುದು ಎನ್ನುವ ಕಾರಣಕ್ಕೆ ತಕ್ಷಣ ವಾಪಸ್ ಬಂದು ತನಿಖೆಗೆ ಹಾಜರಾಗು ಎಂದು ಪ್ರಜ್ವಲ್ಗೆ ಸಂದೇಶ ಕೊಟ್ಟಿದ್ದೇನೆ, ದೇವೇಗೌಡರು ಕೊನೆ ಎಚ್ಚರಿಕೆ ಕೊಟ್ಟಿದ್ದಾರೆ, ದೇವೇಗೌಡರು ನೀಡಿದ ಎಚ್ಚರಿಕೆ ಬಗ್ಗೆ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡುತ್ತಿದ್ದಾರೆ, ಎಷ್ಟು ವರ್ಷ ಇವರು ದೇವೆಗೌಡರ ಜತೆ ಕೆಲಸ ಮಾಡಿದ್ದಾರೆ, ಅವರು ಯಾವ ರೀತಿ ರಾಜಕಾರಣ ಮಾಡಿದ್ದಾರೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ.
ಇದನ್ನೇ ನಿಮ್ಮ ಕುಟುಂಬಕ್ಕೆ ಅನ್ವಯಿಸಿಕೊಂಡು ನೋಡಿ, ಆ ನೋವು ಏನು ಎನ್ನುವುದು ಗೊತ್ತಾಗುತ್ತದೆ, ನಿಮಗೆ ನಾಚಿಕೆ ಆಗೋದಿಲ್ಲವೇ, ತನಿಖೆಯ ದಾರಿ ತಪ್ಪಿಸುವ ಕೆಲಸ ನಾನು ಮಾಡಿದೆನಾ.
ಇದೊಂದು ರಾಜಕೀಯ ಪಕ್ಷವಾ, ಇವರಿಗೆ ಗೌರವ ಇದೆಯಾ, ಮಾನ ಮಾರ್ಯಾದೆ ಇದೆಯಾ, ನಿಮ್ಮ ಡಿ.ಕೆ.ಶಿವಕುಮಾರ್, ಅದೇ ಸಿಡಿ ಶಿವು ಮಾಡಿದ್ದು ಗೊತ್ತಿಲ್ಲವೇ, ಆ ವ್ಯಕ್ತಿಯನ್ನು ಶಿವಕುಮಾರ್ ಎನ್ನುವುದು ಉಪಯೋಗಕ್ಕೆ ಬರೋದಿಲ್ಲ, ಅವರನ್ನು ಸಿಡಿ ಶಿವು ಅಂತಲೇ ಕರೆಯಬೇಕು, ಯಾಕಪ್ಪ ಸೀಡಿ ಶಿವು, ಬ್ರೋಕರ್ ಶಿವರಾಮೇಗೌಡ ಜತೆ ಮಾತನಾಡಿದೆ ಎಂದು ಕುಮಾರಸ್ವಾಮಿ ನೇರವಾಗಿ ಪ್ರಶ್ನಿಸಿದರು.
ಇಡೀ ಪ್ರಕರಣದಲ್ಲಿ ಇವರು ಯಾರದ್ದು ಪಾತ್ರ ಇಲ್ಲ ಎಂದರೆ ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ಯಾಕೆ ಮಾತನಾಡಿದರು, ಇನ್ನು ಏನಾದರೂ ಸಾಕ್ಷ್ಯ, ಮೆಟಿರಿಯಲ್ ಇದೆಯಾ, ಅಂತ ಯಾಕೆ ಕೇಳಿದರು, ಬ್ರೋಕರ್ ಕೆಲಸ, ತಲೆ ಹಿಡಿಯುವ ಕೆಲಸ ಮಾಡುತ್ತಿರುವುದು ಅವರು.
ಯಾವ ನೈತಿಕತೆ ಇಟ್ಟುಕೊಂಡಿದ್ದೀರಾ
ಪಕ್ಷದ ಎಕ್ಸ್ ಖಾತೆಯಲ್ಲಿ ನನ್ನ ಬಗ್ಗೆ ಪೋಸ್ಟ್ ಹಾಕಿ ಅವಹೇಳನ ಮಾಡುತ್ತೀರಾ, ನೀವು ಯಾವ ನೈತಿಕತೆ ಇಟ್ಟುಕೊಂಡಿದ್ದೀರಾ ಎಂದು ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಗೃಹ ಸಚಿವರು ತನಿಖೆ ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳಬೇಕು, ನಿಜವಾದ ಅಪರಾಧಿ ವಿರುದ್ಧ ಕ್ರಮ ಕೈಗೊಳ್ಳಲಿ, ನಮ್ಮದೇನೂ ತಕರಾರು ಇಲ್ಲ, ನಿಮಗೂ ತಂದೆ ತಾಯಿ ಇದ್ದಾರೆ, ಒಡಹುಟ್ಟಿದ ಅಕ್ಕತಂಗಿಯರಿದ್ದಾರೆ, ಅರ್ಥ ಮಾಡಿಕೊಳ್ಳಿ.
ಸರಕಾರ ಹಾಗೂ ಅಧಿಕಾರಿಗಳಿಗೆ ಗೌರವ ಕೊಡುವ ವಾತಾವರಣವಿಲ್ಲ, ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಗೌರವವಿಲ್ಲ, ಏಕೆಂದರೆ ಸರಕಾರ ಆ ರೀತಿ ಇದೆ, ಪೊಲೀಸ್ ಅಧಿಕಾರಿಗಳನ್ನು ಆ ರೀತಿ ಬಳಕೆ ಮಾಡಿಕೊಂಡಿದ್ದಾರೆ ಸರಕಾರದವರು.
ರಾಜ್ಯದಲ್ಲಿ ಕಾನೂನು ಸಂಪೂರ್ಣ ಕುಸಿತವಾಗಿದೆ, ಇದು ಸರಕಾರದ ಸ್ವಯಂಕೃತ ಅಪರಾಧ, ಈ ಸರಕಾರದ ಬಗ್ಗೆ ಅಧಿಕಾರಿಗಳಲ್ಲೂ ವಿಶ್ವಾಸವಿಲ್ಲ, ಜನತೆಯಲ್ಲೂ ವಿಶ್ವಾಸವಿಲ್ಲ ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.