ಬೆಂಗಳೂರು:ಬಿಜೆಪಿಯವರನ್ನ ಹೋಗಲಿ ಎಂದು ಸುಮ್ಮನೆ ಬಿಟ್ಟಿದ್ದೆವು, ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತೊಡೆ ತಟ್ಟಿದ್ದಾರೆ.
ನಮ್ಮ ವಿರುದ್ಧವೇ ದೂರು ನೀಡಿದ ಮೇಲೆ ಇನ್ನು ನಾವು ಸುಮ್ಮನೆ ಕೂರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ದೊರೆತ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಹೆಸರು ಬರುತ್ತದೆ ಎಂದು ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನೂ ಸೇರಿಸಿದ್ದಾರೆ.
ಮೊಕದ್ದಮೆ ಎದುರಿಸುವುದು ಗೊತ್ತು
ನಮ್ಮನ್ನು ರಾಜಕೀಯ ಮಾಡಲು ಬಿಜೆಪಿ ಅವರು ಕರೆಯುತ್ತಿದ್ದಾರೆ, ಅದನ್ನು ಮಾಡುತ್ತೇವೆ, ಇವರು ದಾಖಲಿಸಿರುವ ಮೊಕದ್ದಮೆಯನ್ನು ಹೇಗೆ ಎದುರಿಸಬೇಕೆಂಬುದು ತಿಳಿದಿದೆ, ಕಾನೂನಿಗೆ ಗೌರವ ಕೊಟ್ಟು ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದೇವೆ.
ಇಡೀ ದೇಶದಲ್ಲೇ ಕರ್ನಾಟಕ ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ, ಬಿಜೆಪಿಯ ಭ್ರಷ್ಟಾಚಾರ ಬಯಲು ಮಾಡಲು ಅವರೇ ಕರೆಯುತ್ತಿದ್ದಾರೆ, ಈಗ ನಾವು ನಮ್ಮ ಶಕ್ತಿ ತೋರಿಸುತ್ತೇವೆ.
ನಮ್ಮ ಜಾಹೀರಾತುಗಳ ಬಗ್ಗೆ ಬಿಜೆಪಿಯವರು ಖಾಸಗಿ ದೂರು ನೀಡಿದ್ದಾರೆ, ನಾವು ಸುಮ್ಮನೆ ಜಾಹೀರಾತು ನೀಡಿಲ್ಲ, ಬಿಜೆಪಿ ನಾಯಕರ, ಸಚಿವರ ಹೇಳಿಕೆಗಳ ಆಧಾರದ ಮೇಲೆ ಹಾಗೂ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ಹಿಂದಿನ ರಾಜ್ಯ ಬಿಜೆಪಿ ಸರಕಾರದ ಹಗರಣಗಳ ಬಗ್ಗೆ ಪತ್ರಿಕಾ ಜಾಹೀರಾತು ನೀಡಿದ್ದೆವು, ಇದನ್ನೆಲ್ಲಾ ನಾವು ಸಾಬೀತು ಮಾಡುತ್ತೇವೆ.
ಬಿಜೆಪಿಯವರೇ ಆರೋಪ ಮಾಡಿದ್ದರು
ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ತಮ್ಮ ಬಿಜೆಪಿ ಸರ್ಕಾರದ ಮೇಲೆ ಹಗರಣದ ಆರೋಪ ಮಾಡಿದ್ದರು, ಹಣ ನೀಡದೆ ಯಾವುದೇ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು, ಮುಖ್ಯಮಂತ್ರಿ ಸ್ಥಾನಕ್ಕೆ 2,500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ಎಂದು ಹೇಳಿಕೆ ನೀಡಿದವರು ಬಿಜೆಪಿಯವರೇ.
ಕಾಸಿದ್ದರೆ ಸರ್ಕಾರಿ ಹುದ್ದೆ ಎನ್ನುವ ಪತ್ರಿಕಾ ವರದಿಯ ಪ್ರಕಾರ, ಎ ದರ್ಜೆಯ ಗೆಜೆಟೆಡ್ ಹುದ್ದೆಗೆ 70 ಲಕ್ಷ, ಎಸಿಗೆ 1.50 ಕೋಟಿ, ಡಿವೈಎಸ್ಪಿಗೆ 80 ಲಕ್ಷ, ತಹಶೀಲ್ದಾರ್ ಹುದ್ದೆಗೆ 60-80 ಲಕ್ಷ, ಪೊಲೀಸ್ ಸಬ್ಇನ್ಸ್ಪೆಕ್ಟರ್ ಹುದ್ದೆಗೆ 40 ಲಕ್ಷದಿಂದ 1.5 ಕೋಟಿ, ಅಸಿಸ್ಟೆಂಟ್ ಎಂಜಿನಿಯರ್ಗೆ 80 ಲಕ್ಷ, ಸಹಾಯಕ ಅರಣ್ಯ ಅಧಿಕಾರಿಗೆ 50 ಲಕ್ಷ, ಎಸ್ಡಿಎಗೆ 10 ರಿಂದ 15 ಲಕ್ಷ ರೂ. ಫಿಕ್ಸ್ ಆಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು, ಈ ಆಧಾರದಲ್ಲಿ ಕಾಂಗ್ರೆಸ್ ಜಾಹೀರಾತು ನೀಡಿತ್ತು ಎಂದರು.