ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜಿನಾಮೆ ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಯಾರೂ, ಯಾವ ಬೆದರಿಕೆಯೂ ಹಾಕಿಲ್ಲ, ಪ್ರಾಥಮಿಕ ವರದಿ ಪಡೆದು ನಂತರ ತೀರ್ಮಾನಿಸಲಾಗುವುದು ಎಂದರು.
ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ 19 ರಿಂದ 20 ಮತಗಳ ಅಗತ್ಯವಿದ್ದು, ನಾಮಪತ್ರಗಳ ಪರಿಶೀಲನೆ ನಂತರ ಸ್ಪಷ್ಟ ಚಿತ್ರಣ ತಿಳಿಯಲಿದೆ, ಚುನಾವಣೆ ನಡೆದರೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.
ಬೆಂಗಳೂರಿನಲ್ಲಿ ಉತ್ತಮ ಮಳೆ
ಬೆಂಗಳೂರಿನಲ್ಲಿ ಒಳ್ಳೆ ಮಳೆಯಾಗಿದ್ದು, ಮಳೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ, ಮಳೆ ಜಾಸ್ತಿಯಾದಾಗ ಸಮಸ್ಯೆಗಳು ಉಂಟಾಗುತ್ತವೆ, ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಲಾಗಿದೆ.
ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಒಪ್ಪಲು ಸಾಧ್ಯವಿಲ್ಲ, ಕರ್ನಾಟಕದಲ್ಲಿ ನಾವು ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ, ಈ ಸಮೀಕ್ಷೆಯನ್ನು ನಾವು ಸಂಪೂರ್ಣ ತಳ್ಳಿಹಾಕುತ್ತೇವೆ ಎಂದರು.