ಬೆಂಗಳೂರು: ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆ ಮಧ್ಯಭಾಗದಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಮತ್ಸ್ಯಾಗಾರ ನಿರ್ಮಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಇಂದಿಲ್ಲಿ ತಿಳಿಸಿದ್ದಾರೆ.
ಮೃಗಾಲಯ ಪ್ರಾಧಿಕಾರದ 156ನೇ ಆಡಳಿತ ಮಂಡಳಿ ಸಭೆ ಅಧ್ಯಕ್ಷತೆ ವಹಿಸಿದ ಅವರು, ಮತ್ಸ್ಯಾಗಾರದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಸಮಾಲೋಚನಾ ಸಂಸ್ಥೆ ಆಯ್ಕೆ ಮಾಡಿ, 15 ದಿನದೊಳಗೆ ಪ್ರಸ್ತಾವನೆ ಮಂಡಿಸಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮತಿ ನೀಡಲಾಯಿತು.
ಪ್ರವಾಸಿಗರ ಸೆಳೆಯಲು ಕ್ರಮ
ರಾಜ್ಯದಲ್ಲಿರುವ ವಿವಿಧ ಮೃಗಾಲಯಗಳಿಗೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಮತ್ತು ಆದಾಯ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು.
ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ನೀಗಿಸಲು ಮತ್ತು ಮೃಗಾಲಯದ ವನ್ಯಜೀವಿಗಳು ಸೋಂಕು ರೋಗಗಳಿಂದ ಸಾವಿಗೀಡಾಗದಂತೆ ಕ್ರಮ ವಹಿಸಲು ಪಶುವೈದ್ಯರ ನೇಮಕಾತಿಗೆ ಅನುಮೋದನೆ.
ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸ್ಥಳೀಯ ಪಶುವೈದ್ಯಾಧಿಕಾರಿಗಳ ಸೇವೆ ಪಡೆಯಲು ಘಟನೋತ್ತರ ಅನುಮೋದನೆ.
ಗದಗ ಮೃಗಾಲಯದ ವಿಸ್ತರಣೆ ಮತ್ತು ಅಭಿವೃದ್ಧಿಗೆ 13.20 ಎಕರೆ ಭೂಸ್ವಾಧೀನ ಮತ್ತು ಮೃಗಾಲಯದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟ ಪೂರೈಕೆ ಪ್ರಸ್ತಾವನೆಗಳಿಗೆ ಸಮ್ಮತಿ.
ಬನ್ನೇರುಘಟ್ಟ ಜೈವಿಕ ಉದ್ಯಾನ
ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ, ಪಕ್ಷಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಒದಗಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು, ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ.
ಅಲ್ಲದೆ, ಬನ್ನೇರುಘಟ್ಟ ಉದ್ಯಾನದಲ್ಲಿ ನೇರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು 21 ಸಾವಿರ ಮಾಸಿಕ ವೇತನ ಮೀರಿದ 153 ಸಿಬ್ಬಂದಿಗೆ ಸಿ.ಜಿ.ಎಚ್.ಎಸ್. ದರದಂತೆ ವೈದ್ಯಕೀಯ ವೆಚ್ಚ ಭರಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಈಗಿರುವ ಸಿಂಹ, ಹುಲಿ ಸಫಾರಿ ಜೊತೆಗೆ ಈ ತಿಂಗಳಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಸಚಿವರು ಸೂಚಿಸಿದರು.
ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಪಿಪಿಪಿ ಮಾದರಿಯಲ್ಲಿ ಸಿಹಿ ನೀರು ಮತ್ತು ಉಪ್ಪುನೀರಿನ ಮತ್ಸ್ಯಾಗಾರಗಳ ಪರಿಕಲ್ಪನೆ ಅಧ್ಯಯನ ಮತ್ತು ಕಾರ್ಯಸಾಧ್ಯತೆ ವರದಿ ಪರಿಶೀಲಿಸಿ ಜಾಗತಿಕ ಮಾನದಂಡಗಳ ರೀತ್ಯ ಮತ್ಸ್ಯಾಗಾರ ನಿರ್ಮಾಣ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿನ ರಣಹದ್ದು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸ್ಯಾಟಲೈಟ್ ಕೇಂದ್ರವಾಗಿ ಕಾರ್ಯನಿರ್ವಹಣೆ ಸೂಚಿಸಲಾಯಿತು.