ಬೆಂಗಳೂರು:ಕರ್ನಾಟಕ ಸರ್ಕಾರ ಪ್ರವಾಸೋದ್ಯಮದ ಅಭಿವೃದ್ಧಿಗೆ ಬದ್ಧವಾಗಿದ್ದು, ಹೆಚ್ಚು ಬಂಡವಾಳ ಆಕರ್ಷಣೆಗೆ ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಮತ್ತು ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ದಕ್ಷಿಣ ಭಾರತ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ನೀತಿಯಿಂದ ಹೆಚ್ಚು ಹೂಡಿಕೆದಾರರನ್ನು ಸೆಳೆಯಬಹುದು, ಕೈಗಾರಿಕೋದ್ಯಮಿಗಳು ಬಲಗೊಂಡಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ, ಸರ್ಕಾರ ಬಲಗೊಳ್ಳುತ್ತದೆ ಎಂದರು.
ಸಾಗರೋತ್ತರ ಉದ್ದಿಮೆ ಅಭಿವೃದ್ಧಿ
ಆಂಧ್ರ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣದ ಪ್ರತಿನಿಧಿಗಳು ಅನುಭವಗಳನ್ನು ಹಂಚಿಕೊಳ್ಳಬೇಕು, ಕರ್ನಾಟಕ ರಾಜ್ಯ 300 ಕಿ.ಮೀ.ಗೂ ಹೆಚ್ಚು ಕರಾವಳಿ ಪ್ರದೇಶ ಹೊಂದಿದೆ, ಸಾಗರೋತ್ತರ ಉದ್ದಿಮೆಯ ಅಭಿವೃದ್ಧಿಗೆ ಸಲಹೆ ನೀಡಿ.
ನೀರಾವರಿ ಹಾಗೂ ಬೆಂಗಳೂರು ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನಿರೀಕ್ಷೆ ಮಾಡುತ್ತೇನೆ, ಬೆಂಗಳೂರು ಐಟಿ, ಬಿಟಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸದೃಢವಾಗಿದೆ, ಬೆಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯಲು ಕಾರ್ಯಸೂಚಿ ಸಿದ್ಧಪಡಿಸಬೇಕು.
ಕಬ್ಬನ್ ಪಾರ್ಕ್, ಲಾಲ್ಬಾಗ್ ಪ್ರವಾಸಿಗರನ್ನು ಸೆಳೆಯುತ್ತಿದ್ದವು, ಈಗ ಹೊಸ ಪೀಳಿಗೆಗೆ ಹೊಸತನ್ನು ನೀಡಬೇಕಿದೆ, ಅದಕ್ಕಾಗಿ ಸ್ಕೈಡೆಕ್ ನಿರ್ಮಾಣಕ್ಕೆ ಯೋಜಿಸಲಾಗಿದೆ, ಅನೇಕ ಪ್ರಸಿದ್ಧ ನಗರಗಳಲ್ಲಿ ಎತ್ತರದ ಗೋಪುರಗಳು ಆಕರ್ಷಣೀಯ ಕೇಂದ್ರಗಳಾಗಿವೆ, ಅದರಂತೆ ಬೆಂಗಳೂರಿನಲ್ಲೂ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ, ಮುಂದಿನ 8-10 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು.
ಡಿಸ್ನಿ ಲ್ಯಾಂಡ್ ಮಾದರಿ
ಬೃಂದಾವನ ಉದ್ಯಾನವನ್ನು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು, ಕಳೆದ ಬಜೆಟ್ನಲ್ಲೇ ಅನುದಾನ ನೀಡಲು ತೀರ್ಮಾನಿಸಲಾಗಿತ್ತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಕಸ ವಿಲೇವಾರಿ, ನೀರು, ರಸ್ತೆ, ಮೂಲಸೌಕರ್ಯ ಅಭಿವೃದ್ಧಿ, ಟ್ರಾಫಿಕ್ ಸೇರಿದಂತೆ ಅನೇಕ ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ಯೋಜನೆ ಹಾಕಿಕೊಳ್ಳಲಾಗಿದೆ.
ಶೇ.18ಕ್ಕೂ ಹೆಚ್ಚಿನ ಜಿಎಸ್ಟಿ ಪ್ರವಾಸೋದ್ಯಮವನ್ನು ಕೊಲ್ಲುತ್ತಿದೆ, ಇದರ ಬಗ್ಗೆ ಕೇಂದ್ರ ಎಚ್ಚೆತ್ತುಕೊಳ್ಳುವಂತೆ ದಕ್ಷಿಣ ಭಾರತೀಯರು ಹೋರಾಡಬೇಕು, ಬ್ಯಾಂಕ್ ಬಡ್ಡಿ ದರ, ಇತರೇ ತೆರಿಗೆಗಳು ಸೇರಿ ಅರ್ಧಕ್ಕೂ ಹೆಚ್ಚು ಹಣ ಕೇಂದ್ರದ ಪಾಲಾದರೆ ಹೂಡಿಕೆದಾರರು ಪ್ರವಾಸೋದ್ಯಮದ ಕಡೆ ಗಮನ ಹರಿಸುವುದಿಲ್ಲ, ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು ಎಂದರು.