ಬೆಂಗಳೂರು:ಮಂಡ್ಯದಲ್ಲಿ ಡಿಸೆಂಬರ್ 20, 21, 22 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಜೂನ್ನಲ್ಲಿ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿತ್ತು, ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಯಿತು, ಇದೀಗ ಡಿಸೆಂಬರ್ ತಿಂಗಳಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗಿ
ರಾಜ್ಯ, ಹೊರ ರಾಜ್ಯ ಹಾಗೂ ವಿದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸುವ ನಿರೀಕ್ಷೆ ಇದೆ, ಸರ್ಕಾರ ಹಾಗೂ ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ.
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಹಿತಿ ನೀಡಲಾಗುವುದು, ಜಿಲ್ಲಾಡಳಿತ ಹಾಗೂ ಸಾಹಿತ್ಯ ಪರಿಷತ್ ಸಾಹಿತಿಗಳ ಪಟ್ಟಿ ನೀಡಿದ ನಂತರ ಸರ್ಕಾರದೊಂದಿಗೆ ಚರ್ಚಿಸಿ ಸಮ್ಮೇಳನಾಧ್ಯಕ್ಷರ ಹೆಸರು ಅಂತಿಮಗೊಳಿಸಲು ತೀರ್ಮಾನಿಸಲಾಯಿತು.
ಮಂಡ್ಯದಲ್ಲಿ 3ನೇ ಬಾರಿಗೆ ಆಯೋಜನೆ
ಮಂಡ್ಯದಲ್ಲಿ 48 ನೇ ಸಾಹಿತ್ಯ ಸಮ್ಮೇಳನ 1974 ರಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಅಧ್ಯಕ್ಷತೆಯಲ್ಲಿ, 63ನೇ ಸಾಹಿತ್ಯ ಸಮ್ಮೇಳನ 1994 ರಲ್ಲಿ ಡಾ.ಚದುರಂಗ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಇದೀಗ ಮೂರನೇ ಬಾರಿ ಸಮ್ಮೇಳನ ಆಯೋಜಿಸಲಾಗುತ್ತಿದೆ, ಎಲ್ಲರೂ ಸೇರಿ ಸಮ್ಮೇಳನವನ್ನು ಯಶಸ್ವಿಯಾಗಿ ಅಯೋಜಿಸುವ ವಿಶ್ವಾಸವಿದೆ ಎಂದರು.
ಹಾಲಿನ ದರ ಏರಿಕೆ ಕುರಿತು ಯಾವುದೇ ಮಾಹಿತಿ ಇಲ್ಲ, ದರ ಏರಿಕೆಯನ್ನು ಕೆಎಂಎಫ್ ತೀರ್ಮಾನಿಸುತ್ತದೆ, ನೆರೆಯ ರಾಜ್ಯಗಳ ದರಕ್ಕೆ ಅನುಗುಣವಾಗಿ ಏರಿಕೆ ಮಾಡಲು ತೀರ್ಮಾನಿಸಿರಬಹುದು ಎಂದರು.