ಬೆಂಗಳೂರು:ತಪ್ಪು ಮಾಡಿದವರ ರಕ್ಷಣೆಗೆ ಸರ್ಕಾರ ನಿಂತಿಲ್ಲ, ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಜರುಗಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರು ಅಧಿಕಾರಿಗಳೇ ಆಗಿರಬಹುದು ಅಥವಾ ರಾಜಕೀಯ ವ್ಯಕ್ತಿಗಳೇ ಇರಬಹುದು, ಯಾರೇ ಇದ್ದರೂ ಕ್ರಮ ಜರುಗಿಸುವುದು ಖಚಿತ ಎಂದರು.
ಬಿಜೆಪಿ ಪ್ರತಿಭಟನೆ
ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ, ಬ್ಯಾಂಕ್ ಅಧಿಕಾರಿಗಳ ವಂಚನೆ ಕುರಿತು ತನಿಖೆ ನಡೆಸುತ್ತಿದೆ, ಸಚಿವಾಲಯದಲ್ಲಿನ ವಂಚನೆ ಆರೋಪ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ, ಬಿಜೆಪಿ ಪ್ರತಿಭಟನೆ ಮಾಡಲಿ, ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಿ ಯಾರು ಬೇಡ ಅನ್ನುತ್ತಾರೆ.
ಹಗರಣ ತನಿಖೆ ವೇಳೆ ಸಚಿವರು, ಶಾಸಕರ ಮೇಲೆ ಆರೋಪ ಮಾಡುವುದು ಸಹಜ, ತನಿಖೆಯ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಹೊಸ ಅಪರಾಧ ಕಾನೂನು
ದೇಶದಲ್ಲಿ ಇಂದಿನಿಂದ ಜಾರಿಗೆ ಬಂದಿರುವ ಮೂರು ಹೊಸ ಅಪರಾಧ ಕಾನೂನುಗಳ ಪರಿಣಾಮದ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ, ಇಂದಿನಿಂದ ದಾಖಲಾಗುವ ಪ್ರಕರಣಗಳಿಗೆ ಹೊಸ ಕಾನೂನುಗಳು ಅನ್ವಯವಾಗಲಿವೆ, ಹೊಸ ಕಾಯ್ದೆಗಳ ಯಶಸ್ಸು ಅಥವಾ ವೈಫಲ್ಯ ಈಗಲೇ ಗೊತ್ತಾಗುವುದಿಲ್ಲ.
ಪ್ರಕರಣಗಳು ದಾಖಲಾದ ಬಳಿಕ ಕೋರ್ಟ್ನಲ್ಲಿ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು, ಇಡೀ ದೇಶದಲ್ಲಿ ಹೊಸ ಕಾನೂನು ಜಾರಿ ಮಾಡಿರುವುದರಿಂದ ಎಲ್ಲ ಕಡೆಯಿಂದ ಪ್ರತಿಕ್ರಿಯೆ ಬರಬೇಕು, ಕಾನೂನಿನಲ್ಲಿ ಸರ್ಕಾರ ಕೆಲವು ಪರಿಷ್ಕರಣೆ ಮಾಡಬಹುದು.
ಹೊಸ ಕಾನೂನುಗಳ ಬಗ್ಗೆ ಗೃಹ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ, ಪೊಲೀಸರಿಗಾಗಿ ಹೊಸದಾಗಿ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ, ಪೊಲೀಸರಿಗೆ ಹೊಂದಿಕೆ ಆಗೋವರೆಗೂ ಈ ಆಪ್ ನೋಡಿಕೊಂಡು ಕೆಲಸ ಮಾಡಲು ಸಹಾಯವಾಗಲಿದೆ ಎಂದರು.
ಅಂತರ-ಜಿಲ್ಲಾ ವರ್ಗಾವಣೆ
ಕಾನ್ಸ್ಟೇಬಲ್ಗಳ ಅಂತರ-ಜಿಲ್ಲಾ ವರ್ಗಾವಣೆಗೆ ನಿಯಮಗಳನ್ನು ರೂಪಿಸಲಾಗುತ್ತಿದೆ, ಈವರೆಗೆ ನಿಯಮಗಳಿರಲಿಲ್ಲ, ಪತಿ-ಪತ್ನಿ ವರ್ಗಾವಣೆಯನ್ನೂ ಮಾಡಲಾಗುವುದು, ಈ ಕುರಿತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಚರ್ಚಿಸಿದ್ದೇನೆ, ಅಂತರ-ಜಿಲ್ಲಾ ವರ್ಗಾವಣೆ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು.
ಸರ್ಕಾರದ ಭವಿಷ್ಯದ ಕುರಿತು ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳು, ವ್ಯಾಖ್ಯಾನಗಳು ವಿಭಿನ್ನವಾಗಿವೆ, ಬೊಮ್ಮಾಯಿ ಒಂದು ಹೇಳಿಕೆ ಕೊಟ್ಟರೆ, ಸಿ.ಟಿ.ರವಿ ಇನ್ನೊಂದು ಹೇಳಿಕೆ ಕೊಡುತ್ತಾರೆ, ಅವರಲ್ಲೇ ಹೊಂದಾಣಿಕೆ ಇಲ್ಲ.
ಅಭಿವೃದ್ಧಿ ಮರೆತಿಲ್ಲ
ಸರ್ಕಾರ ಅಭಿವೃದ್ಧಿ ಕೆಲಸ ಮರೆತಿಲ್ಲ, ಜನರಿಗೆ ಕೊಟ್ಟ ಮಾತನ್ನೂ ಮರೆತಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇವೆ, ಯಾವ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ.
ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ಉದ್ದೇಶಗಳು ಸರಿಯಿದ್ದರೆ ಸರ್ಕಾರ ಗಮನಿಸುತ್ತದೆ, ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು ಎಂದರು.