ಎಲ್ಲ ವರ್ಗದ ಗ್ರಾಹಕರಿಗಾಗಿ
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಮದ್ಯ ಮಾರಾಟ ಮಳಿಗೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಇಂದಿಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಧ್ಯಮ ವರ್ಗದಿಂದ ಸಮಾಜದ ಪ್ರತಿಯೊಂದು ವರ್ಗದ ಗ್ರಾಹಕರನ್ನೂ ಸೆಳೆಯುವುದು ಎಂಎಸ್‌ಐಎಲ್‌ನ ಗುರಿಯಾಗಿದೆ. ಸಾಮಾನ್ಯ ಬೆಲೆಯಿಂದ ಅತ್ಯಂತ ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಉತ್ಪನ್ನಗಳು ಸುಲಭವಾಗಿ ಸಿಗಲಿದೆ ಎಂದರು.
ಎಂಎಸ್‌ಐಎಲ್ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಲಹೆ ಮೇರೆಗೆ ಮದ್ಯ ಮಾರಾಟ ಮಳಿಗೆಗಳನ್ನು ಹೈಟೆಕ್ ರೀತಿ ವಿನ್ಯಾಸ ಮಾಡಲು ಆರಂಭಿಸಿದ್ದು ಹಂತಹಂತವಾಗಿ ಎಲ್ಲವನ್ನೂ ಬದಲಿಸಲಾಗುವುದು.
ಎಂಎಸ್‌ಐಎಲ್ ರಾಜ್ಯದಲ್ಲಿ ಒಟ್ಟು 1,029 ಮದ್ಯ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ. ಈ ಪೈಕಿ 200 ಮಳಿಗೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದರಲ್ಲಿ 20 ಮಳಿಗೆಗಳು ಬೆಂಗಳೂರಿನಲ್ಲೇ ಇರಲಿವೆ. ಈ ಎಲ್ಲ ಮಳಿಗೆಗಳಲ್ಲೂ ಚಿಲ್ಲರೆ ಮಾರಾಟ ದರದಲ್ಲಿ ಅತ್ಯುತ್ಕೃಷ್ಟ ಮದ್ಯಗಳು ಲಭ್ಯವಾಗಲಿವೆ ಎಂದರು.
ಎಂಎಸ್‌ಐಎಲ್ ರಾಜ್ಯದಲ್ಲಿರುವ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂತಹ ತಲಾ 2 ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಮಳಿಗೆ ತೆರೆಯಲಾಗುವುದು.
ಗುಣಮಟ್ಟದ ಖಾತ್ರಿ
ಇಂತಹ ಮಳಿಗೆಗಳಿಂದ ಸಂಸ್ಥೆಯ ವಹಿವಾಟು ಶೇಕಡ 30ರಿಂದ 40ರಷ್ಟು ಏರಿಕೆಯಾಗಲಿದೆ. ಇಲ್ಲಿ ಲಭ್ಯವಿರುವ ಬ್ರಾಂಡೆಡ್ ಮದ್ಯಗಳಿಗೆ ಗುಣಮಟ್ಟದ ಖಾತ್ರಿ ಇರಲಿದೆ. ಸಂಸ್ಥೆಯು ವಹಿವಾಟನ್ನು 4 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ.
ವಾರ್ಷಿಕ 10 ಸಾವಿರ ಕೋಟಿ ರೂ. ಮೊತ್ತದ ಚಿಟ್ ಫಂಡ್ ವ್ಯವಹಾರ, ಲೇಖನ ಸಾಮಗ್ರಿಗಳ ಮಾರಾಟಕ್ಕೆ ಫ್ರಾಂಚೈಸಿಗಳ ಆರಂಭ, 10 ಮೆಗಾ ಮೆಡಿಕಲ್ ಶಾಪ್ ಆರಂಭ ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಿದ್ದು, ಪ್ರತಿಯೊಂದು ವಹಿವಾಟಿನಲ್ಲೂ ಕಾರ್ಪೊರೇಟ್ ಸ್ಪರ್ಶ ನೀಡಲಾಗುವುದು ಎಂದರು.


