ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ತಮ್ಮ ಅಧಿಕೃತ ನಿವಾಸವನ್ನಾಗಿ ಕುಮಾರಕೃಪಾ ಅತಿಥಿಗೃಹವನ್ನು ಬಳಸಿಕೊಳ್ಳಲು ತೀರ್ಮಾನಿಸಿದ್ದಾರೆ.
ಕುಮಾರ ಕೃಪ ಅತಿಥಿ ಗೃಹದ ಹಳೆಯ ಕಟ್ಟಡ ಪ್ರದೇಶ ಸಾಕಷ್ಟು ವಿಶಾಲವಾಗಿದೆ. ಸಾರ್ವಜನಿಕರ ಭೇಟಿ, ಅಧಿಕಾರಿಗಳೊಂದಿಗೆ ಸಭೆ, ವಾಹನ ನಿಲುಗಡೆ ಸೇರಿದಂತೆ ಹಲವು ಅನುಕೂಲಕರ ಅಂಶಗಳನ್ನು ಈ ಕಟ್ಟಡ ಹೊಂದಿದೆ.
ಹೀಗಾಗಿ ಇದನ್ನು ತಮ್ಮ ಅಧಿಕೃತ ನಿವಾಸವಾಗಿ ಮಾರ್ಪಡಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ತೀರ್ಮಾನಿಸಿದ್ದಾರೆ.
ಕುಮಾರಕೃಪಾ ಅತಿಥಿ ಗೃಹದ ಹಳೆಯ ಕಟ್ಟಡದಲ್ಲಿ ಇದೀಗ ಮುಖ್ಯಮಂತ್ರಿ ನಿವಾಸಕ್ಕೆ ಬೇಕಾಗಿರುವ ಮೂಲಸೌಕರ್ಯವನ್ನು ಸೃಷ್ಟಿಸಲು ತೀರ್ಮಾನಿಸಲಾಗಿದೆ.
ಕುಮಾರ ಕೃಪಾ ರಸ್ತೆಯಲ್ಲಿರುವ ಈ ಭವ್ಯ ಕಟ್ಟಡವನ್ನು ಸುಮಾರು 100 ವರ್ಷಗಳಿಗಿಂತಲೂ ಹಿಂದೆ ನಿರ್ಮಿಸಲಾಗಿದೆ.
ಈ ಹಳೆಯ ಬಂಗಲೆಯು ಯುರೋಪಿಯನ್ ಶೈಲಿಯ ಶಾಸ್ತ್ರೀಯ ವಾಸ್ತುಶಿಲ್ಪವನ್ನು ಹೋಲುತ್ತದೆ. ಈ ಕಟ್ಟಡದಲ್ಲಿ ಎತ್ತರವಾದ ಸೀಲಿಂಗ್‌ಗಳು, ವಿಶಾಲವಾದ ವರಾಂಡಾಗಳು, ಕಮಾನು ಮಾದರಿಯ ಕಿಟಕಿಗಳು ಮತ್ತು ಸುತ್ತಲೂ ಹರಡಿರುವ ಹಸಿರು ಉದ್ಯಾನವನ. ಇದು ರಾಜ ಗಾಂಭೀರ್ಯವನ್ನು ಉಳಿಸಿಕೊಂಡಿದೆ.
ಮೈಸೂರಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ನಿವಾಸವಾಗಿ ಇದನ್ನು ನಿರ್ಮಿಸಲಾಗಿತ್ತು. ಶೇಷಾದ್ರಿ ಅಯ್ಯರ್ ಅವರ ನಿಧನದ ನಂತರ, ಈ ಆಸ್ತಿಯನ್ನು ಮೈಸೂರು ರಾಜಮನೆತನದವರು ಖರೀದಿಸಿದರು. ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರಿಗೆ ಬಂದಾಗ ತಂಗಲು ಮತ್ತು ಅವರ ಆಪ್ತ ಅತಿಥಿಗಳಿಗೆ ಆತಿಥ್ಯ ನೀಡಲು ಈ ಬಂಗಲೆಯನ್ನು ಬಳಸುತ್ತಿದ್ದರು.
1923 ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಸುಮಾರು ನಾಲ್ಕು ತಿಂಗಳ ಕಾಲ ಗಾಂಧೀಜಿಯವರು ತಮ್ಮ ಆರೋಗ್ಯ ಸುಧಾರಣೆಗಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಆ ಸಮಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗಾಂಧೀಜಿಯವರನ್ನು ಮೈಸೂರು ರಾಜ್ಯದ ಅಧಿಕೃತ ಅತಿಥಿಯನ್ನಾಗಿ ಘೋಷಿಸಿ, ಅವರಿಗೆ ಕುಮಾರಕೃಪಾ ಬಂಗಲೆಯಲ್ಲಿ ಉಳಿದುಕೊಳ್ಳಲು ರಾಜಾತಿಥ್ಯದ ವ್ಯವಸ್ಥೆ ಮಾಡಿಕೊಟ್ಟಿದ್ದರು.
ಗಾಂಧೀಜಿಯವರು ಇಲ್ಲಿ ತಂಗಿದ್ದಾಗ ಪ್ರತಿದಿನ ಸಂಜೆ ಇಲ್ಲಿನ ವಿಶಾಲ ಮೈದಾನದಲ್ಲಿ ಸಾರ್ವಜನಿಕ ಪ್ರಾರ್ಥನಾ ಸಭೆಗಳು ನಡೆಯುತ್ತಿದ್ದವು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಇದು ಕರ್ನಾಟಕ ಸರ್ಕಾರದ ಅಧಿಕೃತ ರಾಜ್ಯ ಅತಿಥಿ ಗೃಹವಾಗಿ ಮಾರ್ಪಟ್ಟಿತು.
ಈಗ ಇದನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಮಾರ್ಪಡಿಸಲಾಗುತ್ತಿದೆ. ಸದ್ಯ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿರುವ ಕಾವೇರಿ ಬಂಗ್ಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಆಧುನಿಕರಣಗೊಳಿಸಿದ್ದರು.
ಹೀಗಾಗಿ ಇನ್ನು ಕೆಲವು ದಿನಗಳ ಕಾಲ ಸಿದ್ದರಾಮಯ್ಯ ಅವರು ಅದೇ ಮನೆಯಲ್ಲಿ ವಾಸಿಸಲಿ ಎಂದು ಬಯಸಿರುವ ಡಿ.ಕೆ.ಶಿವಕುಮಾರ್ ಕುಮಾರ ಕೃಪಾ ಅತಿಥಿಗೃಹವನ್ನು ತಮ್ಮ ಅಧಿಕೃತ ನಿವಾಸವಾಗಿ ಬಳಸಲು ತೀರ್ಮಾನಿಸಿದ್ದಾರೆ.


