ಬೆಂಗಳೂರು:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೃಪಾಕಟಾಕ್ಷ ಹೊಂದಿದವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಮಂತ್ರಿ ಆಗಲಿದ್ದಾರೆ.
ಮುಖ್ಯಮಂತ್ರಿ ಜುಲೈ 15ರ ಒಳಗೆ ತಮ್ಮ ಮಂತ್ರಿಮಂಡಲ ವಿಸ್ತರಿಸಿ 18 ಮಂದಿ ಸೇರ್ಪಡೆಗೆ ಪೂರ್ವ ಸಿದ್ಧತೆ ನಡೆಸಿದ್ದಾರೆ.
ಒಂದು ಸುತ್ತಿನ ಸಮಾಲೋಚನೆ
ವಿಸ್ತರಣೆಗೆ ಸಂಬಂಧಿಸಿದಂತೆ ಖರ್ಗೆ ಅವರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿರುವ ಶಿವಕುಮಾರ್, ಮಂಗಳವಾರ ತಡರಾತ್ರಿ ನಗರದ ಪಂಚತಾರಾ ಹೋಟೆಲ್ ಒಂದರಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು.
ಸಂಪುಟ ವಿಸ್ತರಣೆ ವೇಳೆ ಮೂಲ ಕಾಂಗ್ರೆಸ್ಸಿಗರು ಹಾಗೂ ಯುವ ನಾಯಕರಿಗೆ ಹೆಚ್ಚು ಅವಕಾಶ ದೊರೆಯಲಿದೆ.
ಸಂಭವನೀಯ ಸಚಿವರ ಪಟ್ಟಿಗೆ ಸಂಬಂಧಿಸಿದಂತೆ ಖರ್ಗೆ ಜೊತೆ ಸಮಾಲೋಚನೆ ಸಂದರ್ಭದಲ್ಲಿ, ಪಕ್ಷಕ್ಕೆ ಹೆಚ್ಚು ದುಡಿದವರಿಗೆ ಅವಕಾಶ ಕಲ್ಪಿಸೋಣ ಎಂದಿದ್ದಲ್ಲದೆ, ಯಾವ ಮಾನದಂಡಗಳನ್ನು ಅನುಸರಿಬೇಕೆಂಬ ಬಗ್ಗೆಯೂ ಚರ್ಚಿಸಲಾಗಿದೆ.
ಶಾಸಕರ ಪೈಪೋಟಿ
ಸಂಪುಟ ಸೇರಲು ಒಕ್ಕಲಿಗ ಮತ್ತು ವೀರಶೈವ ಸಮುದಾಯದ ಶಾಸಕರಲ್ಲಿ ಭಾರೀ ಪೈಪೋಟಿ ಇದೆ, ಉಳಿದ ಸಮುದಾಯದವರಿಂದ ಹೆಚ್ಚು ಒತ್ತಡ ಕಂಡು ಬಂದಿಲ್ಲ.
ಆದರೆ, ಎಲ್ಲಾ ಸಮುದಾಯ ಮತ್ತು ಪ್ರಾಂತ್ಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ ಖರ್ಗೆ ಕಿವಿಮಾತು ಹೇಳಿದ್ದಾರೆ.
ವಿಸ್ತರಣೆಗೆ ಸಂಬಂಧಿಸಿದಂತೆ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಸಲಹೆ ನೀಡಿ, ಹೆಚ್ಚು ಒತ್ತಡಕ್ಕೆ ಒಳಗಾಗುವುದು ಬೇಡ, ಆಡಳಿತದ ಕಡೆ ಗಮನಹರಿಸಿ, ನಿಮಗೆ ಅಗತ್ಯವಿರುವವರ ಹೆಸರು ನೀಡಿ, ಉಳಿದಿದ್ದನ್ನು ನಾವು ಮತ್ತು ಖರ್ಗೆ ನಿಭಾಯಿಸುತ್ತೇವೆ ಎಂದಿದ್ದಾರೆ.
ವರಿಷ್ಠರ ತೀರ್ಮಾನ ಅಂತಿಮ
ರಾಹುಲ್ ಗಾಂಧಿ ಸಂದೇಶದ ನಂತರ ಶಿವಕುಮಾರ್ ಬಹಿರಂಗ ಹೇಳಿಕೆ ನೀಡಿ, ಮಂತ್ರಿ ಯಾರಾಗಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ, ನಿಮ್ಮ ಬೇಡಿಕೆಗಳನ್ನು ನಾನು ಅವರ ಗಮನಕ್ಕೆ ತರುತ್ತೇನೆ, ಆದರೆ ಅವರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರೊಬ್ಬರಿಗೂ ಮಂತ್ರಿಸ್ಥಾನದ ಸ್ಪಷ್ಟ ಭರವಸೆ ನೀಡದೆ, ಖರ್ಗೆ ಅವರನ್ನು ಭೇಟಿ ಮಾಡುವಂತೆ ಸೂಕ್ಷ್ಮವಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಾ ಮಂತ್ರಿಮಂಡಲ ವಿಸ್ತರಣೆ ಕುರಿತು ಹೆಚ್ಚು ಆಸಕ್ತಿ ಹೊಂದಿಲ್ಲವಾದರೂ, ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೆಸರು ಮಾತ್ರ ಶಿಫಾರಸು ಮಾಡಿದ್ದಾರೆ.
ಸಂಪುಟ ವಿಸ್ತರಣೆ ಕಸರತ್ತು
ರಾಹುಲ್ ಗಾಂಧಿ, ಗುರುವಾರ ಅಥವಾ ಶುಕ್ರವಾರ ಸ್ವದೇಶಕ್ಕೆ ಮರಳಲಿದ್ದು, ನಂತರ ಸಂಪುಟ ವಿಸ್ತರಣೆ ಕಸರತ್ತು ಇನ್ನಷ್ಟು ಚುರುಕಾಗಲಿದೆ.
ಉನ್ನತ ಮೂಲಗಳ ಪ್ರಕಾರ ಜುಲೈ 10ರಂದು ಮುಖ್ಯಮಂತ್ರಿ ಅವರನ್ನು ದೆಹಲಿಗೆ ಕರೆಸಿಕೊಂಡು ಮಂತ್ರಿಮಂಡಲ ವಿಸ್ತರಣೆಗೆ ರಾಹುಲ್ ಗಾಂಧಿ ಅನುಮತಿ ನೀಡುತ್ತಾರೆ ಎಂಬ ಮಾಹಿತಿ ಇದೆ.


