ಬೆಂಗಳೂರು: ತಾವು ಬಯಸಿದ ಖಾತೆ ನೀಡಲಿಲ್ಲ ಎಂದು ಅಸಮಾಧಾನಗೊಂಡು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಹೈಕಮಾಂಡ್ ಸೇರಿದಂತೆ ಹಲವು ನಾಯಕರ ಸಂಧಾನಕ್ಕೆ ಮಣಿದು ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ.
ಸಂಪುಟ ರಚನೆಗೂ ಮುನ್ನ ತಮಗೆ ನೀಡಿದ ಭರವಸೆಯಂತೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲಿಲ್ಲ ಎಂದು ಬೇಸರಗೊಂಡು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಧಾನಕ್ಕೂ ಮಣಿಯದೆ ತಮಿಳುನಾಡಿನ ಕೃಷ್ಣಗಿರಿಗೆ ತೆರಳಿದ್ಜ ರಾಮಲಿಂಗಾರೆಡ್ಡಿ ಬೆಳಿಗ್ಗೆ ಬೆಂಗಳೂರಿಗೆ ವಾಪಸ್ ಆದರು.
ಆನಂತರ ಹಲವು ನಾಟಕೀಯ ವಿದ್ಯಮಾನಗಳು ನಡೆದವು. ಮೊದಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾಸಗಿ ಹೋಟೆಲ್ ನಲ್ಲಿ ರಾಮಲಿಂಗಾರೆಡ್ಡಿ ಅವರ ಜೊತೆಗೆ ಸುಧೀರ್ಘ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು. ಇದಾದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಲಿಂಗಾರೆಡ್ಡಿ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದರು.
ಬಳಿಕ ಶಾಸಕರ ಭವನಕ್ಕೆ ಆಗಮಿಸಿದ ರಾಮಲಿಂಗಾರೆಡ್ಡಿ ಅವರ ಜೊತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಂಧಾನ ಮಾತುಕತೆ ನಡೆಸಿದರು. ಈ ವೇಳೆ ಸದ್ಯದಲ್ಲೇ ನಡೆಯಲಿರುವ ಸಂಪುಟ ವಿಸ್ತರಣೆ ಸಮಯದಲ್ಲಿ ತಮ್ಮ ಅನುಭವಕ್ಕೆ ಧಕ್ಕೆ ತಾರದೆ ರೀತಿಯಲ್ಲಿ ಜವಾಬ್ದಾರಿ ನೀಡಲಾಗುವುದು. ಅಷ್ಟೇ ಅಲ್ಲ, ಮುಂಬರುವ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುವುದು ಎಂದು ಭರವಸೆ ನೀಡುವ ಮೂಲಕ ರಾಮಲಿಂಗಾರೆಡ್ಡಿ ಅವರ ಅಸಮಾಧಾನ ತಣಿಸುವ ಪ್ರಯತ್ನ ನಡೆಸಿದರು.
ಇದಾದ ಬಳಿಕ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಹೈಕಮಾಂಡ್ ನೀಡಿದ ಸಲಹೆಗೆ ಸಂಬಂಧಿಸಿದ ರಾಮಲಿಂಗಾರೆಡ್ಡಿ ರಾಜಿನಾಮೆಯ ತಮ್ಮ ನಿರ್ಧಾರ ವಾಪಾಸ್ ಪಡೆಯುವದಾಗಿ ತಿಳಿಸಿದರು.
ಗೊಂದಲಕ್ಕೆ ತೆರೆ :
ಇದಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸುದ್ದಿಗಾರರ ಜೊತೆ ಮಾತನಾಡಿದ ಸುರ್ಜೇವಾಲ ರಾಜ್ಯ ಕಾಂಗ್ರೆಸ್ ನಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಿದೆ. ಬಿಜೆಪಿ ನಾಯಕರು ಅನಗತ್ಯ ಕಾರಣಕ್ಕಾಗಿ ಗೊಂದಲ ಮೂಡಿಸಲು ಪ್ರಯತ್ನ ನಡೆಸಿದರು. ಆದರೆ ಕಾಂಗ್ರೆಸ್ ಒಂದು ಕುಟುಂಬದ ರೀತಿಯಲ್ಲಿ ವರ್ತಿಸುವ ಮೂಲಕ ಅವರ ಪ್ರಯತ್ನವನ್ನು ಮೂಲೆಗುಂಪು ಮಾಡಿತು ಎಂದು ಹೇಳಿದರು.
ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಜವಾಬ್ದಾರಿಯುತ ಹಿರಿಯ ನಾಯಕ. ಎಂಟು ಬಾರಿ ಶಾಸಕರಾಗಿ ಆಯ್ಕೆಯಾದವರು ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ವಿದ್ಯಾರ್ಥಿ ಕಾಂಗ್ರೆಸ್ ನಿಂದ ರಾಜಕಾರಣಕ್ಕೆ ಧುಮುಕಿದ ಅವರು ಇಂದಿಗೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪಾಲಿಗೆ ಅವರು ಅಮೂಲ್ಯವಾದ ಆಸ್ತಿ. ಹೀಗಾಗಿ ಅವರು ಹೈಕಮಾಂಡ್ ಮಾತಿಗೆ ಒಪ್ಪಿ ತಮ್ಮ ರಾಜೀನಾಮೆ ನಿರ್ಧಾರವನ್ನು ಬದಲಾಯಿಸಿದ್ದಾರೆ. ಅಲ್ಲದೆ ತಾವು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿಸಿದರು.
ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರೊಂದಿಗೆ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡಿ ರಾಜೀನಾಮೆ ವಾಪಸ್ ಪಡೆಯಲು ಕೋರಿದೆವು. ಅದಕ್ಕೆ ಸಮ್ಮತಿಸಿದ ಅವರು ರಾಜೀನಾಮೆ ವಾಪಸ್ ಪಡೆದಿದ್ದಾರೆ ಎಂದರು.
ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿರುಕು ಮೂಡಿದೆ ಎಂದು ಸಂಭ್ರಮಿಸುತ್ತಿದ್ದ ಬಿಜೆಪಿಗೆ ಇದರಿಂದ ಭ್ರಮನಿರಸನ ವಾಗಿದೆ. ಎಲ್ಲಾ ಕಾಂಗ್ರೆಸ್ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಅಂಗೀಕಾರ ಇಲ್ಲ:
ಇದಕ್ಕೂ ಮುನ್ನ ರಾಮಲಿಂಗಾರೆಡ್ಡಿ ಅವರ ಜೊತೆ ನಡೆಸಿದ ಸಂಧಾನದ ಕುರಿತಾಗಿ ಮಾಹಿತಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ತಾವು ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಅಂಗೀಕರಿಸುವುದಿಲ್ಲ.ಅವರು ತಮ್ಮ ನಿರ್ಧಾರ ವಾಪಾಸ್ ಪಡೆಯಲಿದ್ದಾರೆ ಎಂದು ಹೇಳಿದರು.
ಹಿರಿಯರಾದ ರಾಮಲಿಂಗಾರೆಡ್ಡಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಈ ವೇಳೆ ಹಲವಾರು ವಿಷಯಗಳು ಚರ್ಚೆ ಮಾಡಿದ್ದಾರೆ. ಅವುಗಳನ್ನು ಈಗ ಬಹಿರಂಗವಾಗಿ ಚರ್ಚಿಸುವುದಿಲ್ಲ. ಅವರು ತಮ್ಮ ನಿರ್ಧಾರ ಬದಲಿಸಿ ಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.


