ಬೆಂಗಳೂರು:ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಭಾಗಗಳ ಪರಿಸ್ಥಿತಿ ಪರಿಶೀಲಿಸಿ ಬರ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಖುದ್ದಾಗಿ ನಾಲ್ಕು ವಿಭಾಗಗಳಲ್ಲೂ ಪ್ರವಾಸ ಮಾಡಿ ಪರಿಸ್ಥಿತಿ ಅವಲೋಕಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಬರ ಘೋಷಣೆ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
ಅಂಕಿ-ಅಂಶಗಳ ಮಾಹಿತಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಅಂಕಿ-ಅಂಶಗಳ ಮಾಹಿತಿ ಇಲ್ಲದೆ, ಬರಗಾಲ ಪೀಡಿತ ಪ್ರದೇಶ ಎಂಬುದಾಗಿ ಘೋಷಣೆ ಮಾಡಲಾಗುವುದಿಲ್ಲ.
ಇದೀಗ ಕಲಬುರಗಿ ವಿಭಾಗ ಮುಗಿಸಿದ ನಂತರ ಜುಲೈ 9ರಂದು ಬೆಳಗಾವಿ ವಿಭಾಗ ಜುಲೈ 14ರ ನಂತರ ಮೈಸೂರು ಹಾಗೂ ಬೆಂಗಳೂರು ವಿಭಾಗದ ಅಧಿಕಾರಿಗಳ ಸಭೆ ನಡೆಸಿ, ಮಳೆ ಕೊರತೆ ಮಾಹಿತ ಪಡೆದುಕೊಳುತ್ತೇನೆ.
ಈಗಾಗಲೇ ಸಚಿವರುಗಳೂ ಮತ್ತು ಅಧಿಕಾರಿಗಳು ಪರಿಸ್ಥಿತಿ ಬಗ್ಗೆ ಅವಲೋಕನ ಮತ್ತು ಸಭೆಗಳನ್ನು ನಡೆಸುತ್ತಿದ್ದಾರೆ, ಇಂತಹ ಸಂದರ್ಬದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ರೈತರು ಬೇಡಿಕೆಗಳನ್ನು ಮಂಡಿಸಿದ್ದಾರೆ.
ಒಣಹವೆ ಮುಂದುವರಿಕೆ
ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು-ಮೂರು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ, ಆದರೆ, ಇದು ಕರಾವಳಿ ಮತ್ತು ಮಲೆನಾಡಿಗೆ ಸೀಮಿತಗೊಂಡಿದೆ, ಉಳಿದ ಭಾಗಗಳಲ್ಲಿ ಒಣಹವೆ ಹಾಗೆಯೇ ಮುಂದುವರೆದಿದೆ ಎಂದರು.
ಬರಗಾಲ ಛಾಯೆ ಹಿನ್ನೆಲೆಯಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂಬ ಪ್ರಶ್ನೆಗೆ ಮುಖ್ಯಮಂತ್ರಿ ಸ್ಪಷ್ಟ ಉತ್ತರ ನೀಡಲಿಲ್ಲ.
ನಂತರ ಅಧಿಕಾರಗಳ ಸಭೆ ನಡೆಸಿದ ಮುಖ್ಯಮಂತ್ರಿ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಕಟ್ಟಕಡೆ ವ್ಯಕ್ತಿಗೂ ಹಕ್ಕು
ಸರ್ವರನ್ನೂ ಒಳಗೊಂಡ ಪರಿಶುದ್ಧ ಆಡಳಿತ, ಅಭಿವೃದ್ಧಿ ಮತ್ತು ಕಟ್ಟಕಡೆಯ ವ್ಯಕ್ತಿಗೆ ನಾಗರಿಕ ಹಕ್ಕುಗಳನ್ನು ತಲುಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದ್ದು, ಇದನ್ನು ಸಾಧಿಸಲು ಅಧಿಕಾರಿ ವರ್ಗ ಅತ್ಯಂತ ಕ್ರಿಯಾಶೀಲ, ಜನಪರ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಒಂದೇ ವೇಗದಲ್ಲಿ ಸಾಗಬೇಕು, ಜನತೆ ನಮ್ಮ ಮೇಲೆ ಇಟ್ಟಿರುವ ನಂಬಿಕೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ, ನಮ್ಮನ್ನು ಈ ಸ್ಥಾನದಲ್ಲಿ ಕೂರಿಸಿರುವವ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ.
ನನಗೆ ಆಡಳಿತದ ಪ್ರತಿಯೊಂದು ಹಂತದಲ್ಲಿ ಏನು ನಡೆಯುತ್ತದೆ ಎಂಬುದು ಚೆನ್ನಾಗಿ ಗೊತ್ತಿದೆ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ನೆಪಗಳನ್ನು ಕೇಳಲು ಸಿದ್ಧನಿಲ್ಲ, ಫಲಿತಾಂಶವೇ ಮುಖ್ಯ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದರು.
ಜನತೆಯ ಋಣ ತೀರಿಸಿ
ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿದ್ದರೆ ನಾಡಿನ ಜನತೆಯ ಋಣ ತೀರಿಸಿದಂತಾಗುತ್ತದೆ, ಜನಪರ ಕೆಲಸ ಮಾಡದಿದ್ದರೆ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ.
ದೇಶಾದ್ಯಂತ ಮಳೆಯ ಅಭಾವದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ, ರಾಜ್ಯದ ಪರಿಸ್ಥಿತಿ ಸಮಾಧಾನಕರವಾಗಿದೆ, ಅಂತರರಾಜ್ಯ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರೊಂದಿಗೆ ಐತಿಹಾಸಿಕ ಮಟ್ಟದ ಚರ್ಚೆ ನಡೆಸಿದ್ದೇವೆ.
ಕೃಷ್ಣ, ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆ ಯೋಜನೆಯನ್ನು ಸುಮಾರು ಒಂದು ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮುಂದುವರಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಸಕಾರಾತ್ಮಕ ಸ್ಪಂದನೆ ನೀಡಿದೆ, ರಾಜಕೀಯ ಭಿನ್ನಾಭಿಪ್ರಾಯ ಮೀರಿ ರಾಜ್ಯದ ಜನರ ಹಿತಾಸಕ್ತಿ ರಕ್ಷಣೆ ಆದ್ಯತೆಯಾಗಿಸಿ ಒಟ್ಟಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಕೆರೆ ತುಂಬಿಸುವುದು ಮತ್ತು ರಸಗೊಬ್ಬರ ಸಮರ್ಪಕ ವಿತರಣೆಗೆ ಯಾವುದೇ ತೊಂದರೆ ಆಗಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.


