ಬೆಂಗಳೂರು:ರಾಜ್ಯದಲ್ಲಿ ಇನ್ನು ಮುಂದೆ ಗುಟ್ಕಾ, ತಂಬಾಕು ಉತ್ಪನ್ನ ಹಾಗೂ ತಂಬಾಕು ಮಿಶ್ರಿತ ಪಾನ್ ಮಸಾಲಾ ಸಿಗುವುದಿಲ್ಲ.
ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಬುಧವಾರ ಮಹತ್ವದ ಆದೇಶ ಹೊರಡಿಸಿದ್ದು, ಪಾನ್ ಮಸಾಲಾ ಉತ್ಪನ್ನಗಳ ಮಾರಾಟದ ಮೇಲೆ ಒಂದು ವರ್ಷದ ನಿಷೇಧ ವಿಧಿಸಿದೆ.
ಗಂಭೀರ ಸ್ವರೂಪದ ಆನಾರೋಗ್ಯ
ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯನ ದೇಹದ ಮೇಲೆ ಗಂಭೀರ ಸ್ವರೂಪದ ಆನಾರೋಗ್ಯದ ಪರಿಣಾಮಗಳು ಉಂಟಾಗುತ್ತವೆ ಎಂಬ ವರದಿ ಶಿಫಾರಸುಗಳನ್ನು ಆಧರಿಸಿ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ಮಾರಾಟದ ಮೇಲೆ ಒಂದು ವರ್ಷದ ನಿಷೇಧ ಹೇರಿದೆ.
ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಆಯುಕ್ತರು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಪಾನ್ ಮಸಾಲಾ ಮಿಶ್ರಣ
ಪಾನ್ ಮಸಾಲಾದೊಂದಿಗೆ ಮಿಶ್ರಣ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವ ತಂಬಾಕು ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ.
ಆದೇಶ ಉಲ್ಲಂಘಿಸಿ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರ ವಿರುದ್ಧ ಬಿಎನ್‌ಎಸ್ ಕಾಯಿದೆ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.


