ಬೆಂಗಳೂರು:ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಡಿ.ಕೆ.ಶಿವಕುಮಾರ್ ಸದನ ಪ್ರವೇಶಿಸುವ ಮುನ್ನ ಮುಖ್ಯದ್ವಾರ ಹಾಗೂ ಮುಖ್ಯಮಂತ್ರಿ ಆಸನಕ್ಕೆ ಶಿರಬಾಗಿ ನಮಸ್ಕರಿಸಿದರು.
ಕಳೆದ ಮೂರು-ನಾಲ್ಕು ದಶಕಗಳಿಂದ ನಿರಂತರವಾಗಿ ಸದನದ ಸದಸ್ಯರಾಗಿರುವ ಶಿವಕುಮಾರ್, ವಿರೋಧ ಪಕ್ಷದ ಉಪನಾಯಕರಾಗಿ, ವಿವಿಧ ಇಲಾಖಾ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಉಪಮುಖ್ಯಮಂತ್ರಿಯಾಗಿದ್ದರು
ಸಿದ್ದರಾಮಯ್ಯ ಆಡಳಿತದಲ್ಲಿ ಮುಖ್ಯಮಂತ್ರಿಗಳ ಪಕ್ಕದ ಆಸನದಲ್ಲಿ ಕುಳಿತು ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ, ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ ನಂತರ ನಡೆಯುತ್ತಿರುವ ಮೊದಲ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಧಾನಸೌಧದ ಮೊಗಸಾಲೆಯಲ್ಲಿನ ಕಚೇರಿ ದ್ವಾರಕ್ಕೆ ಶಿರಬಾಗಿ ನಮಸ್ಕರಿಸಿ ತಮ್ಮ ಕಾರ್ಯ ಆರಂಭಿಸಿದರು.
ಈ ವಿಶೇಷ ಕ್ಷಣದ ಕುರಿತು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅನಿಸಿಕೆ ಹಂಚಿಕೊಂಡಿರುವ ಮುಖ್ಯಮಂತ್ರಿ, ಕೋಟ್ಯಂತರ ಕನ್ನಡಿಗರ ಆಶೀರ್ವಾದದೊಂದಿಗೆ, ಪ್ರಜಾಪ್ರಭುತ್ವದ ಆಶಯಕ್ಕೆ ಶಿರಬಾಗಿ ಮುಖ್ಯಮಂತ್ರಿಯಾಗಿ ಸದನಕ್ಕೆ ನನ್ನ ಮೊದಲ ಹೆಜ್ಜೆ ಎಂದು ಪ್ರತಿಕ್ರಿಯಿಸಿದ್ದಾರೆ.


