ಮಿಯಾಮಿ (ಅಮೆರಿಕ):ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಂಪೂರ್ಣ ಗುಣಮುಖರಾಗಿರುವ ಕನ್ನಡ ಚಿತ್ರರಂಗದ ಹೆಸರಾಂತ ನಟ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಮತ್ತು ಕರ್ನಾಟಕದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ಅಮೆರಿಕದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಕಿಡ್ನಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು, ಎಲ್ಲ ವೈದ್ಯಕೀಯ ಪರೀಕ್ಷಾ ವರದಿಗಳು ನೆಗೆಟಿವ್ ಬಂದಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವೈದ್ಯರು ಅಧಿಕೃತ ಹೇಳಿಕೆ ನೀಡಿದ್ದಾರೆ.
ಅಭಿಮಾನಿ ದೇವರುಗಳ ಹಾರೈಕೆ
ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ಅಭಿಮಾನಿ ದೇವರುಗಳ ಹಾರೈಕೆ ಮತ್ತು ಪ್ರಾರ್ಥನೆಯಿಂದ ನಾನು ಗುಣಮುಖನಾಗಿದ್ದೇನೆ, ವೈದ್ಯರ ಅತ್ಯುತ್ತಮ ಚಿಕಿತ್ಸೆ, ಸ್ನೇಹಿತರು, ಸಹ ಕಲಾವಿದರ ಹಾರೈಕೆಯಿಂದ ಚೇತರಿಸಿಕೊಂಡಿದ್ದೇನೆ ಎಂದಿದ್ದಾರೆ.
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೀತಾ ಮತ್ತು ಮಗಳಾದ ನಿವೇದಿತಾ ಪಾತ್ರ ಬಹಳ ದೊಡ್ಡದು ಎಂದಿರುವ ಅವರು, ಚಿಕಿತ್ಸಾ ಪ್ರಕ್ರಿಯೆಯಲ್ಲಿ ನೆರವಾದ ಎಲ್ಲರಿಗೂ, ಆಸ್ಪತ್ರೆ ಸಿಬ್ಬಂದಿಗಳಿಗೂ ಧನ್ಯವಾದ ಅರ್ಪಿಸಿದ್ದಾರೆ.


