ಸಚಿನ್ ಆತ್ಮಹತ್ಯೆ; ಪ್ರಿಯಾಂಕ್ ಖರ್ಗೆ ರಾಜೀನಾಮೆ ಅಗತ್ಯವಿಲ್ಲ
ಬೆಂಗಳೂರು:ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ವಿಸ್ತರಣೆ ಇಲ್ಲವೇ, ಪುನರ್ ರಚನೆ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ಕೈಚೆಲ್ಲಿದ್ದಾರೆ.
ಹಿರಿಯ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜಿನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ, ಇದು ರಾಜಕೀಯ ದ್ವೇಷದಿಂದ ಮಾಡಿರುವ ಆರೋಪ ಎಂದರು.
ಡೆತ್ನೋಟ್ನಲ್ಲಿ ಹೆಸರಿಲ್ಲ
ಆತ್ಮಹತ್ಯೆ ಮಾಡಿಕೊಂಡಿರುವ ಬೀದರ್ನ ಗುತ್ತಿಗೆದಾರನ ಡೆತ್ನೋಟ್ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಇಲ್ಲ, ಪ್ರಕರಣದಲ್ಲಿ ಅವರ ಪಾತ್ರವಾಗಲಿ, ವಿರುದ್ಧ ಸಾಕ್ಷ್ಯವಾಗಲಿ ಇಲ್ಲ, ಆದರೂ ಯಾವುದೇ ವಿಚಾರಣೆಗೆ ಸಿದ್ಧವಿರುವುದಾಗಿ ಸಚಿವರು ತಿಳಿಸಿದ್ದಾರೆ.
ಇಂತಹುದೇ ಪ್ರಕರಣದಲ್ಲಿ ಹಿಂದೆ ಕೆ.ಎಸ್.ಈಶ್ವರಪ್ಪ ಅವರ ಹೆಸರನ್ನು ಡೆತ್ನೋಟ್ನಲ್ಲಿ ಬರೆಯಲಾಗಿತ್ತು, ಪ್ರಕರಣ ಸಂಬಂಧ ದಾಖಲಾಗಿರುವ ದೂರಿನ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ, ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆನ್ನುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ, ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ, ಅವರ ಬೇಡಿಕೆಗೆ ನೈತಿಕತೆ ಇಲ್ಲ.
ಎಫ್ಎಸ್ಎಲ್ ವರದಿ ಬರಲಿ
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣವನ್ನೂ ಸಿಐಡಿಗೆ ವಹಿಸಲಾಗಿದೆ, ಅವಾಚ್ಯ ಪದ ಬಳಕೆ ಬಗ್ಗೆ ಎಫ್ಎಸ್ಎಲ್ ವರದಿ ಬರಲಿದೆ, ಮಹಿಳಾ ಸಚಿವರಿಗೆ ಅವಹೇಳನ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ.
ಹೊಸ ವರ್ಷ ಸಂದರ್ಭದಲ್ಲಿ ವಿರೋಧ ಪಕ್ಷದವರಿಗೆ ಭಗವಂತ ಸದ್ಭುದ್ಧಿ ನೀಡಲೆಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.


