ಬೀದರ್:ಕಾಂಗ್ರೆಸ್‌ನಲ್ಲಿ ಕೆಲವು ಗುಂಪು ನೇರ, ಇನ್ನು ಕೆಲವು ಗುಂಪು ಸೈಲೆಂಟಾಗಿ ಕೆಲಸ ಮಾಡುತ್ತಿವೆ, ಪಕ್ಷದಲ್ಲಿ ಹಲವು ಗುಂಪುಗಳಿರುವುದು ಸತ್ಯ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ಇತರರಂತೆ ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಅಂತ ನಾನು ಹೇಳೋದಿಲ್ಲ, ಆದರೆ, 5 ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆ ಒಪ್ಪಲಾಗದು.
ಅದೇನೋ ಕ್ರಾಂತಿಯಂತೆ
ಮುಖ್ಯಮಂತ್ರಿ ಖುರ್ಚಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಹಲವು ಚಟುವಟಕೆಗಳು ನಡೆಯುತ್ತಿವೆ, ಅದೇನೋ ಕ್ರಾಂತಿ ಆಗುತ್ತೆ ಅಂತ ಹೇಳುತ್ತಿದ್ದಾರೆ, ನೋಡೋಣ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳು ಆರ್ಥಿಕ ದಿವಾಳಿಯಾಗುತ್ತಿವೆ, ಕರ್ನಾಟಕದ ಜನರೂ ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.
ಅಭಿವೃದ್ಧಿ ಕೆಲಸ ಮಾಡದೆ ಎರಡೂವರೆ ವರ್ಷ ಕಾಲಹರಣ ಮಾಡಿದ್ದಾರೆ, ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂಬುದಾಗಿ ಖುದ್ದು ಅವರ ಪಕ್ಷದ ಹಿರಿಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಯಾರಿಗೆ ಬಂದಿದೆ
ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ, ಯಾರಿಗೆ ಗ್ಯಾರಂಟಿ ಬಂದಿದೆ ಎಂದರು.
ದೊಡ್ಡ ಗಾತ್ರದ ಬಜೆಟ್ ಕೊಟ್ಟಿದ್ದೀನಿ ಎಂದು ಮುಖ್ಯಮಂತ್ರಿ ಬೆನ್ನು ತಟ್ಟಿಕೊಳ್ಳುತ್ತಾರೆ, ಆದರೆ, ಸಾಲ ಎಷ್ಟು ಮಾಡಿದ್ದೇವೆ ಎಂಬುದನ್ನು ಸಿದ್ದರಾಮಯ್ಯ ಜನರಿಗೆ ತಿಳಿಸಲಿ.
ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ವಾರ್ಷಿಕ ೫೫ ಸಾವಿರ ಕೋಟಿ ರೂ. ಹೊಂದಿಸಬೇಕು, ಇದೇ ಕಾರಣಕ್ಕೆ ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳು ಆರ್ಥಿಕ ದಿವಾಳಿ ಆಗುತ್ತಿವೆ.

ಸೀಟು ಹಂಚಿಕೆ ಗೊಂದಲ ಇಲ್ಲ
ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಗೊಂದಲಕ್ಕೆ ಎಡೆಮಾಡದೆ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ನಡೆಯಲಿದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ, ಅದನ್ನು ರಾಜ್ಯದ ಜನ ನೋಡಿದ್ದಾರೆ, ಅದರಲ್ಲಿ ಮುಚ್ಚು ಮರೆ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಮೂರನೇ ದೊಡ್ಡ ದೇಶವಾಗಿ ಹೊರಹೊಮ್ಮಿದೆ, ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿ, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು.
ಬೀದರ್ ಜಿಲ್ಲೆಯ ಐತಿಹಾಸಿಕ ಪವಿತ್ರ ಗುರುನಾನಕ್ ಜೀರಾ ಸಾಹಿಬ್ ಗುರುದ್ವಾರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಸಿದ್ದಾರೂಢ ಮಠಕ್ಕೂ ಭೇಟಿ ನೀಡಿ ಡಾ.ಶಿವಕುಮಾರ್ ಮಹಾಸ್ವಾಮೀಜಿ ಆಶೀರ್ವಾದ ಪಡೆದರು.



