ಬೆಂಗಳೂರು:ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಎದುರಾಗಿರುವ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಳೆ ಬರ ಘೋಷಣೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಈ ಸಂಬಂಧ ಬರ ಘೋಷಣೆ ಮತ್ತು ಗುಳೇ ಹೋಗುವುದನ್ನು ತಪ್ಪಿಸಲು ಪ್ರಮುಖ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.
ವಿಡಿಯೊ ಕಾನ್ಫರೆನ್ಸಿಂಗ್
ಇದಕ್ಕೂ ಮುನ್ನ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸಿಂಗ್ ನಡೆಸಿ, ಕುಡಿಯುವ ನೀರು, ರಾಸುಗಳಿಗೆ ಮೇವು ಹಾಗೂ ಕೃಷಿ ಸಂಬಂಧಿತ ಮಾಹಿತಿಯನ್ನು ಜಿಲ್ಲಾಡಳಿತಗಳಿಂದ ಪಡೆಯಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಈಗಾಗಲೇ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಸಭೆ ನಡೆಸಿ, ಬರ ಪರಿಸ್ಥಿತಿ ಸಂಬಂಧ ಮಾಹಿತಿ ಪಡೆಯಲಾಗಿದೆ, ನಾಳೆ ಉಳಿದ ಎಲ್ಲಾ ಜಿಲ್ಲೆಗಳ ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಸಭೆ ತೀರ್ಮಾನಿಸಲಿದೆ ಎಂದರು.
ಮಳೆ ಕೊರತೆ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಬಂದಿದೆ, ಎಲ್ಲೆಲ್ಲಿ ಎಷ್ಟು ಕೊರತೆ ಆಗಿದೆ, ಇದರಿಂದ ಉಂಟಾಗಿರುವ ಕುಡಿಯುವ ನೀರು ಮತ್ತು ರಾಸುಗಳಿಗೆ ಮೇವಿನ ಸಮಸ್ಯೆ, ಉದ್ಯೋಗ ಅರಸಿ ಜನರು ಗುಳೇ ಹೊರಟಿದ್ದಾರೆ ಎಂಬುದು ಗೊತ್ತಿದೆ.
ಗುಳೇ ತಪ್ಪಿಸಲು ಕಾರ್ಯಕ್ರಮ
ಮೊದಲು ಗುಳೇ ತಪ್ಪಿಸಲು ಕಾರ್ಯಕ್ರಮ ರೂಪಿಸುವ ಉದ್ದೇಶದಿಂದ ತುರ್ತು ಮಂತ್ರಿಮಂಡಲ ಸಭೆ ಕರೆಯಲಾಗಿದೆ, ಅಲ್ಲಿ ಎಲ್ಲ ವಿಷಯ ಚರ್ಚಿಸಿ ಬರ ಘೋಷಣೆ ಮಾಡಲಾಗುವುದು ಎಂದರು.
ಈ ಕುರಿತು ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಪ್ರತಿ ಜಿಲ್ಲೆಗೆ ಐದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಅಲ್ಲದೆ, ವಿವಿಧ ಬಾಬ್ತಿನಡಿ ಜಿಲ್ಲಾಡಳಿತದಲ್ಲಿ 929 ಕೋಟಿ ರೂ. ಇದೆ, ಅಗತ್ಯ ಸಂದಭsಗಳಲ್ಲಿ ಈ ಹಣ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಿಯಮ ಸಡಿಲಿಕೆಗೆ ಕೇಂದ್ರಕ್ಕೆ ಪತ್ರ
ಬರ ಪರಿಸ್ಥಿತಿ ನಿಯಮ ಸಡಿಲಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ, ಬರಪೀಡಿತ ಘೋಷಣೆಗೆ ನಿರ್ದಿಷ್ಟ ನಿಯಮಗಳ ಪಾಲನೆ ಕಡ್ಡಾಯವಾಗಿದ್ದು, ಅವುಗಳಲ್ಲಿ ಸಡಿಲಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಬರ ಪರಿಸ್ಥಿತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ, ಇಡೀ ದೇಶದಲ್ಲಿದೆ, ಆದ್ದರಿಂದ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಮನವಿ ಮಾಡಿದ್ದೇವೆ ಎಂದರು.


