ಬೆಂಗಳೂರು:ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಶಾಸಕರಿಗೆ ಬಿಡುಗಡೆಗೊಂಡಿರುವ ತಲಾ 50 ಕೋಟಿ ರೂ. ಅನುದಾನ ಪಡೆಯಲು ಸಿದ್ದರಾಮಯ್ಯ ಅನುಮೋದನೆ ಕಡ್ಡಾಯ.
ನಾಯಕತ್ವ ಬದಲಾವಣೆ ವಿಷಯ ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ ಮುಖ್ಯಮಂತ್ರಿ, ಹೊರಡಿಸಿರುವ ಈ ಆದೇಶ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.


ಬೇಡಿಕೆ ಪತ್ರ ಕಡ್ಡಾಯ
ಶಾಸಕರು ತಾವು ಯಾವ ಕಾಮಗಾರಿಗಳನ್ನು ಕೈಗೊಳ್ಳುತ್ತೇವೆ ಎಂಬ ಬೇಡಿಕೆ ಪತ್ರಕ್ಕೆ ಸಿದ್ದರಾಮಯ್ಯ ಅನುಮೋದನೆ ಕಡ್ಡಾಯವಾಗಿದೆ.
ಅನುಮೋದನೆಗೂ ಮುನ್ನ ಶಾಸಕರು, ಮುಖ್ಯಮಂತ್ರಿ ಸಚಿವಾಲಯದಿಂದ ಬಂದಿರುವ ಪತ್ರವನ್ನು ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿ ಶಶಿಕುಮಾರ್ ಅವರಿಗೆ ತೋರಿಸಿ ಅನುದಾನ ಪಡೆದುಕೊಳ್ಳಲು ಸೂಚಿಸಲಾಗಿದೆ.
ಈ ಸಂಬಂಧ ಜುಲೈ 30 ಹಾಗೂ 31ರಂದು ಪ್ರತಿ ಜಿಲ್ಲಾ ವ್ಯಾಪ್ತಿಯ ಶಾಸಕರ ಪ್ರತ್ಯೇಕ ಸಭೆ ಕರೆದಿದ್ದು, ಅಲ್ಲಿ ಮುಖ್ಯಮಂತ್ರಿ ಅವರಿಗೆ ನೀಡಿರುವ ಬೇಡಿಕೆಗಳ ಮನವಿಪತ್ರ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳುವಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಸ್ವತಃ ಮುಖ್ಯಮಂತ್ರಿಯಿಂದ ಪಟ್ಟಿ
ಶಾಸಕರಿಗೆ ಬಿಡುಗಡೆ ಮಾಡಿರುವ ಹಣವನ್ನು ಕ್ಷೇತ್ರದಲ್ಲಿ ಯಾವ ಉದ್ದೇಶಗಳಿಗೆ ವೆಚ್ಚ ಮಾಡಬೇಕೆಂಬುದನ್ನೂ ಸ್ವತಃ ಮುಖ್ಯಮಂತ್ರಿ ಅವರೇ ಪಟ್ಟಿ ಮಾಡಿ ತಿಳಿಸಿದ್ದಾರೆ.
ಅದರಂತೆ ಲೋಕೋಪಯೋಗಿ ಇಲಾಖೆ ರಸ್ತೆ ಮತ್ತು ಸೇತುವೆ, ಗ್ರಾಮೀಣ ರಸ್ತೆ ಮತ್ತು ಸೇತುವೆ ಹಾಗೂ ನಗರ ಪ್ರದೇಶದ ಕಾಮಗಾರಿಗಳಿಗೆ 37.50 ಕೋಟಿ ರೂ. ವಿನಿಯೋಗಿಸುವಂತೆ ಆದೇಶಿಸಿದ್ದಾರೆ.
ಶಾಸಕರು ತಮ್ಮ ವಿವೇಚನಾಧಿಕಾರದಡಿ ಆಯ್ಕೆ ಮಾಡಬಹುದಾದ ಇತರ ಇಲಾಖಾ ಕಾಮಗಾರಿಗಳ ವೆಚ್ಚಕ್ಕೆ 12.50 ಕೋಟಿ ರೂ.ಗಳನ್ನು ನಿಗದಿ ಪಡಿಸಿದ್ದಾರೆ.

ಚೌಕಟ್ಟಿನಲ್ಲೇ ಕ್ರಿಯಾ ಯೋಜನೆ
ಮುಖ್ಯಮಂತ್ರಿ ಬರೆದಿರುವ ಪತ್ರದ ಚೌಕಟ್ಟಿನಲ್ಲೇ ವಿಧಾನಸಭಾ ಸದಸ್ಯರು ಕ್ರಿಯಾ ಯೋಜನೆಗಳನ್ನು ರೂಪಿಸುವುದು ಕಡ್ಡಾಯ.
ಸಚಿವರ ಹಸ್ತಕ್ಷೇಪ ತಪ್ಪಿಸುವ ಉದ್ದೇಶದಿಂದ ಶಾಸಕರ ಕಾಮಗಾರಿಗಳಿಗೆ ಮುಖ್ಯಮಂತ್ರಿ ಅವರಿಂದಲೇ ನೇರವಾಗಿ ಹಣ ಸಂದಾಯವಾಗಲಿದೆ.
ಶಾಸಕರ ಸುಪರ್ದಿಗೆ ಹಣ
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂಬುದಾಗಿ ಆಡಳಿತ ಸದಸ್ಯರೇ ಎಐಸಿಸಿ ವರಿಷ್ಠರ ಮುಂದೆ ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಬಿಡುಗಡೆ ಆಗಿದ್ದ ಹಣವನ್ನು ಇದೀಗ ಕೆಲವು ಷರತ್ತುಗಳೊಂದಿಗೆ ಶಾಸಕರ ಸುಪರ್ದಿಗೆ ತಲುಪಿಸುವ ಕಾರ್ಯ ನಡೆದಿದೆ.
ಮುಖ್ಯಮಂತ್ರಿ ಅವರಿಂದಲೇ ಅನುಮೋದನೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂಬ ವಿಷಯವೇ ಕಾಂಗ್ರೆಸ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.


