ಬೆಂಗಳೂರು:ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವುದಾಗಿ ಅನಾಮಿಕ ವ್ಯಕ್ತಿಯ ಆರೋಪ ಹಗರಣದ ಸಂಪೂರ್ಣ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಇಂದಿಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಐಎ ತನಿಖೆ ನಡೆಸಿದರೆ ಸರ್ಕಾರದ ಬಗ್ಗೆ ಜನರಿಗೆ ಮತ್ತು ಭಕ್ತರಿಗೆ ವಿಶ್ವಾಸ ಬರಲಿದೆ, ಆದ್ದರಿಂದ, ಮುಖ್ಯಮಂತ್ರಿ ನಿರ್ಧಾರವನ್ನು ತಕ್ಷಣ ನಿರ್ಧಾರ ಕೈಕೊಳ್ಳಬೇಕು ಎಂದರು.
ಸೆ.1ರಂದು ಧರ್ಮಸ್ಥಳ ಚಲೋ
ಹಗರಣ ಎನ್‌ಐಎ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 1ರಂದು ಧರ್ಮಸ್ಥಳ ಚಲೋ ನಡೆಸುತ್ತಿರುವುದಾಗಿ ಪ್ರಕಟಿಸಿದರು.
ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಸರ್ಕಾರದ ವಿರುದ್ಧ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಹಾಗೂ ಎಲ್ಲ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಧರ್ಮಸ್ಥಳಕ್ಕೆ ಬರುವ ವಿಶ್ವಾಸವಿದೆ.
ಧರ್ಮಸ್ಥಳ ಘಟನೆಯಿಂದ ಸರ್ಕಾರಕ್ಕೆ ಬಂದಿರುವ ಕಳಂಕದಿಂದ ಹೊರಗೆ ಬರಬೇಕಿದೆ, ದುಷ್ಕೃತ್ಯದ ಹಿಂದಿರುವ ಸಂಘಟನೆ ಹಾಗೂ ದುಷ್ಟಶಕ್ತಿಗಳ ಬಗ್ಗೆ ಸಮರ್ಪಕ ತನಿಖೆ ಆಗಬೇಕಿದೆ.
ದೇವಾಲಯ ವಿರುದ್ಧ ಷಡ್ಯಂತ್ರ
ದುಷ್ಟಶಕ್ತಿಗಳು ಇನ್ನೊಂದು ಹಿಂದೂ ದೇವಾಲಯ ವಿರುದ್ಧವೂ ಷಡ್ಯಂತ್ರ ಮಾಡುವ ಸಾಧ್ಯತೆ ಇದೆ, ಧರ್ಮಸ್ಥಳ ವಿಷಯದಲ್ಲಿ ಮುಖ್ಯಮಂತ್ರಿ ಆತುರ ತೋರಿದ್ದೇಕೆ ಎಂಬುದು ಒಗಟಾಗಿಯೇ ಇದೆ.
ಧರ್ಮಸ್ಥಳದ ವಿರುದ್ಧ ದಾರಿಯಲ್ಲಿ ಹೋಗುವ ವ್ಯಕ್ತಿಯೊಬ್ಬ ಬುರುಡೆ ತೋರಿಸಿದಾಗ ಆತನ ಹಿಂದಿರುವ ಶಕ್ತಿಗಳು, ಸಂಘಟನೆಗಳು ಯಾವುವು ಎಂಬ ಮಾಹಿತಿ ಸಂಗ್ರಹಿಸಬೇಕಿತ್ತು, ಇಲ್ಲವೇ ಬೇಹುಗಾರಿಕಾ ದಳದಿಂದ ವರದಿ ಪಡೆದು ಸ್ಪಷ್ಟ ನಿರ್ಧಾರ ಕೈಕೊಳ್ಳಬೇಕಿತ್ತು.
ಧರ್ಮಸ್ಥಳದ ವಿಷಯದಲ್ಲಿ ಕಳೆದ ಒಂದು ತಿಂಗಳಿಂದ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ ಎಂದರು.

