ಬೆಂಗಳೂರು:ಪಕ್ಷ ಸಂಘಟನೆಗಾಗಿ ಕಸ ಗುಡಿಸಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ, ಬಾವುಟ ಹಿಡಿದಿದ್ದೇನೆ, ನಾನು ಬೇರೆಯವರಂತೆ ಸಿದ್ಧಗೊಂಡ ವೇದಿಕೆ ಮೇಲೆ ಬಂದು ಭಾಷಣ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ನಾನು ಲೈಫ್ ಟೈಮ್ ಕಾರ್ಯಕರ್ತ, ಉಪಮುಖ್ಯಮಂತ್ರಿ ಆದರೂ ಪಕ್ಷದ ಕಚೇರಿ ಕಸ ಗುಡಿಸುತ್ತೇನೆ.
ಕಾಂಗ್ರೆಸ್‌ಗೆ ತಳಮಟ್ಟದಿಂದ ದುಡಿದಿದ್ದೇನೆ
ನಾನೇನು ಸಿದ್ಧಪಡಿಸಿದ ವೇದಿಕೆಗೆ ಬಂದು.., ಬಂದು ಭಾಷಣ ಮಾಡಿಕೊಂಡು ಹೋಗುವುದಿಲ್ಲ, ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್‌ಗಾಗಿ ತಳಮಟ್ಟದಿಂದ ದುಡಿದಿದ್ದೇನೆ, ಈಗಲೂ ದುಡಿಯುತ್ತಿದ್ದೇನೆ, ಮುಂದೆಯೂ ದುಡಿಯುತ್ತೇನೆ.
ನಾನು ಸಾಮಾನ್ಯ ಕಾರ್ಯಕರ್ತನಂತೆ ಇರುತ್ತೇನೆ ಎಂಬುದಾಗಿ ದೆಹಲಿಯಲ್ಲಿ ನೀಡಿದ ಹೇಳಿಕೆ ಸಮರ್ಥಿಸಿಕೊಂಡ ಶಿವಕುಮಾರ್ ಪರೋಕ್ಷವಾಗಿ ಸಿದ್ದರಾಮಯ್ಯ ಕಾಲೆಳೆದರು.
ಅಧಿಕಾರ ಹಂಚಿಕೆ ಗೊಂದಲ ಮುಂದುವರೆದಿರುವ ಬೆನ್ನಲ್ಲೇ ಶಿವಕುಮಾರ್ ಇದೇ ಮೊದಲ ಬಾರಿಗೆ ಸಂಘಟನೆಯೇ ಮಾಡದವರು ಅಧಿಕಾರ ಅನುಭವಿಸುತ್ತಿದ್ದಾರೆ ಎಂಬ ತಮ್ಮ ಅಸಹನೆ ಹೊರಹಾಕಿದರು.
ನನ್ನ ಕೆಲಸ ಇದ್ದರೆ ಮಾತ್ರ ದೆಹಲಿಗೆ
ಮುಖ್ಯಮಂತ್ರಿ ಗಾದಿಗಾಗಿ ಸದ್ಯಕ್ಕೆ ದೆಹಲಿಗೆ ಹೋಗುವುದಾಗಲಿ, ನಾಯಕರ ಭೇಟಿಯಾಗಲಿ ಇಲ್ಲ, ನನ್ನ ಕೆಲಸ ಇದ್ದರೆ ಮಾತ್ರ ಹೋಗುತ್ತೇನೆ.
ನಾಯಕರು ಕರೆಯದೆ ನಾನಾಗಿ ಹೋಗುವುದಿಲ್ಲ, ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿದ್ದಾರೆ, ಉಪಮುಖ್ಯಮಂತ್ರಿಗೆ ಆಹ್ವಾನ ಇಲ್ಲ.
ಮುಂದೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳ ವಿಸ್ತೃತ ಸಭೆಗೆ ಕರೆಯಬಹುದು, ಆಗ ಹೋಗುತ್ತೇನೆ ಎಂದರು.
ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿಲ್ಲ
ಅಧಿಕಾರ ಹಂಚಿಕೆ ಕುರಿತಂತೆ ಖರ್ಗೆ ಬಳಿ ಮಾತನಾಡಿಲ್ಲ, ಪಂಚಾಯತ್ ರಾಜ್ ವಿಷಯದಲ್ಲಿ ಕೇಂದ್ರ ಸರ್ಕಾರ ತಳೆದಿರುವ ನಿಲುವಿನಿಂದ ರಾಜ್ಯಗಳಿಗೆ ಹೇಗೆ ಅನ್ಯಾಯ ಆಗುತ್ತಿದೆ ಎಂಬ ಕುರಿತು ವಿವರಿಸಿದ್ದೇನೆ.
ನನ್ನ ದೆಹಲಿ ಪ್ರವಾಸದ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದೇನೆ ಎಂದಾಗ, ಸುದ್ದಿಗಾರರು ಅಧಿಕಾರ ಹಂಚಿಕೆ ಕುರಿತು ಕೇಳಿದ ಪ್ರಶ್ನೆಗೆ, ನಾನು ಹೇಳಿದ್ದನ್ನು ಬರೆದುಕೊಳ್ಳಿ, ನೀವು ಕೇಳುವುದಕ್ಕೆಲ್ಲಾ ಉತ್ತರಿಸಲಾಗದು ಎಂದು ಖಡಕ್ಕಾಗಿ ಉತ್ತರಿಸಿದರು.
ನಮ್ಮಲ್ಲಿನ ಗೊಂದಲವನ್ನು ನೀವು ಮತ್ತು ಮುಖ್ಯಮಂತ್ರಿ ಬಗೆಹರಿಸಿಕೊಳ್ಳಿ ಎಂದಿದ್ದಾರೆ, ಆ ಬಗ್ಗೆ ಮಾತನಾಡುತ್ತೇವೆ ಎಂದರು.

