ಬೆಂಗಳೂರು: ಮಧ್ಯಪ್ರಾಚ್ಯದ ಬಿಕ್ಕಟ್ಟು ಹಾಗೂ ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಶೇ.30 ರಷ್ಟು ಆಹಾರ ಉತ್ಪಾದನೆ ಕುಂಠಿತಗೊಳ್ಳಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪ್ರೆಸ್‌ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹವಮಾನ ತಜ್ಞರು ಮತ್ತು ಕೃಷಿ ವಿಜ್ಞಾನಿಗಳು ನೀಡಿರುವ ಮಾಹಿತಿಯಂತೆ ಈ ಬಾರಿ ನಮಗೆ ಪೂರ್ಣ ಪ್ರಮಾದಲ್ಲಿ ಮಳೆಯಾಗುವುದಿಲ್ಲ ಎಂದರು.
ತಜ್ಞರ ವರದಿ ಆಧಾರದ ಮೇಲೆ ಜಲಾನಯನ ಪ್ರದೇಶದ ರೈತರು ಕಬ್ಬು ಮತ್ತು ಭತ್ತದ ಬದಲು ಅಲ್ಪಾವದಿ ರಾಗಿ, ಬೇಳೆಕಾಳುಗಳಂತಹ ಬೆಳೆಗಳನ್ನು ಮಾತ್ರ ಬೆಳೆಯುವಂತೆ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಪಂಚಾಯಿತಿಗಳಿಗೆ ಮಾಹಿತಿ ನೀಡಿ, ರೈತರಿಗೆ ಮಳೆ ಹಾಗೂ ರಸಗೊಬ್ಬರದ ಕೊರತೆ ಬಗ್ಗೆ ಮಾಹಿತಿ ನೀಡಿ, ಅಲ್ಪಾವಧಿ ಬೆಳೆ ಬೆಳೆಯಲು ಸಲಹೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಸಕ್ತ ವರ್ಷ 160 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಗುರಿಯಾಗಿತ್ತು. ಆದರೆ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟು, ಮಳೆ ಕೊರತೆಯಿಂದಾಗಿರುವ ನಮಗೆ ಶೇ. 30 ರಿಂದ 35 ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಕುಂಠಿತಗೊಳ್ಳಲಿದೆ.
ಬೋರ್‌ವೆಲ್ ಇಲ್ಲವೆ ನೀರಾವರಿ ಪ್ರದೇಶದಲ್ಲಿ ಕಬ್ಬು, ಭತ್ತ ಬೆಳೆಯಲು ರೈತರು ಮುಂದಾದರೂ ಅವರಿಗೆ ರಾಸಾಯನಿಕ ಗೊಬ್ಬರಗಳನ್ನು ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡಲು ಸಾಧ್ಯವಿಲ್ಲ.
ಮಳೆ ಕೊರತೆ ಜೊತೆಗೆ ರಸಗೊಬ್ಬರದ ಕೊರತೆಯಿಂದ ನಮಗೆ ಆಹಾರ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಕಡಿತವಾಗುತ್ತದೆ.
ಒಂದು ವೇಳೆ ರಾಜ್ಯದಲ್ಲಿ ಉತ್ತಮ ಮಳೆಯಾಗಿ ನಮ್ಮ ಜಲಾಶಯಗಳಿಗೆ ನೀರು ಹರಿದು ಬಂದರೆ ಮುಂದಿನ ಹಂಗಾಮಿಗೆ ರೈತರ ಭೂಮಿಗೆ ನೀರು ಹರಿಸಿ, ಅವರು ಭತ್ತ, ಕಬ್ಬು ಸೇರಿದಂತೆ ಯಾವುದೇ ಬೆಳೆ ಬೆಳೆಯಲು ಅವಕಾಶ ಮಾಡಿಕೊಡುವ ಭರವಸೆ ನೀಡಿದರು.
ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ರಸಗೊಬ್ಬರ ಉತ್ಪಾದನೆಗೆ ಬೇಕಾದ ಕಚ್ಚಾವಸ್ತುಗಳು ದೊರೆಯದ ಕಾರಣ ರಾಷ್ಟ್ರದಲ್ಲಿ ರಸಗೊಬ್ಬರ ಉತ್ಪಾದನೆಗೂ ತೊಡಕಾಗಿದೆ. ಅಷ್ಟೇ ಅಲ್ಲ ರಸಗೊಬ್ಬರ ಆಮದಿನಲ್ಲಿ ಅಸ್ಥಿರತೆ ಉಂಟಾಗುತ್ತಿದ್ದು, ಇದರಿಂದ ನಮಗೆ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆ ಮೇಲೆ ಭಾರಿ ಪರಿಣಾಮ ಬೀರದಲಿದೆ.
ರಸಗೊಬ್ಬರಗಳಿಗೆ ಪರ್ಯಾಯವಾಗಿ ರೈತರು ಜೈವಿಕ, ಸಾವಯವ ರಸಗೊಬ್ಬರ, ಹಸಿರೆಲೆಗೊಬ್ಬರದ ಕಡೆ ಹೆಚ್ಚು ಒತ್ತುಕೊಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ನಮಗೆ ಬೇಕಾಗಿರುವ ಬೇಡಿಕೆಯಲ್ಲಿ ಶೇ. 50 ರಷ್ಟನ್ನು ಮಾತ್ರ ಪೂರೈಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ರಸಗೊಬ್ಬರಗಳ ಸಮರ್ಪಕ ನಿರ್ವಹಣೆಗೆ ಬಿಗಿ ಕ್ರಮಗಳನ್ನು ಕೈಗೊಂಡಿದೆ ಎಂದರು.
ಹಂಗಾಮಿನ ತೀವ್ರ ಬೇಡಿಕೆ ಸಂದರ್ಭದಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ರಸಗೊಬ್ಬರ ಸಾಗಾಣಿಕೆ ನಿಷೇಧಿಸಲಾಗಿದೆ. ಅಕ್ರಮವಾಗಿ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.


