ಬೆಂಗಳೂರು:ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಅಸಮಾಧಾನ ಶಮನಕ್ಕೆ ಸಣ್ಣ ಪ್ರಮಾಣದಲ್ಲಿ ಮಂತ್ರಿಮಂಡಲ ಪುನರ್ ರಚನೆಗೆ ಪಕ್ಷದ ವರಿಷ್ಠರ ಅನುಮೋದನೆ ಪಡೆಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಸಂಜೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸಂಪುಟ ಪುನರ್ ರಚನೆ ಜೊತೆಗೆ ನೂತನ ಸಚಿವರುಗಳಿಗೆ ಖಾತೆ ಹಂಚಿಕೆಯಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೂ ವರಿಷ್ಠರ ಸಲಹೆ ಪಡೆಯಲಿದ್ದಾರೆ.
ಕೆಲವರ ಖಾತೆಗಳು ಬದಲಾವಣೆ
ದೆಹಲಿಯಿಂದ ಹಿಂತಿರುಗುತ್ತಿದ್ದಂತೆ ಸಂಪುಟಕ್ಕೆ ಸೇರ್ಪಡೆಗೊಂಡ ಹೊಸ ಸಚಿವರಿಗೆ ಖಾತೆ ಹಂಚಿಕೆ ಮಾಡುವುದಲ್ಲದೆ, ಮೊದಲ ಹಂತದಲ್ಲಿ ಮಂತ್ರಿ ಆದ ಕೆಲವರ ಖಾತೆ ಬದಲಾವಣೆ ಆಗಲಿದೆ.
ಭಾನುವಾರ ತಡರಾತ್ರಿವರೆಗೂ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಭೇಟಿ ಮಾಡಲಿದ್ದಾರೆ.
ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದ 19 ಸಚಿವರಿಗೆ ಯಾರಿಗೆ ಯಾವ ಖಾತೆ ಎಂಬುದನ್ನು ಎಐಸಿಸಿ ನಿರ್ಧರಿಸಿದೆ, ಇದು ರಾಜ್ಯದ ಕಾಂಗ್ರೆಸ್ ಶಾಸಕರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದ್ದು, ಪರಿಹರಿಸಲು ನೀವೇ ಮಧ್ಯೆಪ್ರವೇಶ ಮಾಡಬೇಕೆಂದು ವರಿಷ್ಠರನ್ನು ಮುಖ್ಯಮಂತ್ರಿ ಕೋರಲಿದ್ದಾರೆ.
ಹೊಸದಾಗಿ ಮೂವರ ಸೇರ್ಪಡೆ
ಗೊಂದಲ ನಿವಾರಿಸಲು ಸಂಪುಟದಲ್ಲಿ ಒಂದಿಬ್ಬರನ್ನು ಕೈಬಿಟ್ಟು ಹೊಸದಾಗಿ ಮೂರು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಬೇಕು, ಇದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಂಟಾಗಿರುವ ಬೇಸರ ಸರಿಪಡಿಸಬಹುದು.
ನೀವು ಅನುಮತಿ ನೀಡಿದರೆ ಭುಗಿಲೆದ್ದಿರುವ ಭಿನ್ನಮತ ಶಮನಗೊಳಿಸಲು ಸಣ್ಣ ಪ್ರಮಾಣದಲ್ಲಿ ಸಂಪುಟ ಪುನರ್ ರಚನೆ ಮಾಡುವ ಮೂಲಕ ಸಮಸ್ಯೆ ಪರಿಹರಿಸುವುದಾಗಿ ವರಿಷ್ಠರಿಗೆ ಶಿವಕುಮಾರ್ ಭರವಸೆ ನೀಡಲಿದ್ದಾರೆ.
ಮುಖ್ಯಮಂತ್ರಿ ಮನವಿಗೆ ಸ್ಪಂದಿಸಿರುವ ಎಐಸಿಸಿ, ಭಾನುವಾರ ಸಂಜೆ ದೆಹಲಿಗೆ ಬರುವಂತೆ ವೇಣುಗೋಪಾಲ್ ಸೂಚಿಸಿದ್ದಾರೆ.
ನಿಗಮ-ಮಂಡಳಿಗೆ ನೇಮಕ
ಈ ಭೇಟಿ ಸಂದರ್ಭದಲ್ಲಿ ಮಂತ್ರಿಮಂಡಲ ಸಮಸ್ಯೆ ಬಗೆಹರಿಸುವುದಲ್ಲದೆ, ಕೆಲವು ನಿಗಮ-ಮಂಡಳಿಗಳಿಗೆ ಪ್ರಮುಖ ಶಾಸಕರ ನೇಮಕಕ್ಕೂ ಅನುಮತಿ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದೆಹಲಿ ನಾಯಕರಿಂದ ಆಹ್ವಾನ ಬರುತ್ತಿದ್ದಂತೆ ಶಿವಕುಮಾರ್ ಶುಕ್ರವಾರ ತಡರಾತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮುಖಾಮುಖಿ ಚರ್ಚಿಸಿರುವುದಲ್ಲದೆ, ನೀವು ನೀಡುವ ಸಲಹೆಗಳನ್ನು ವರಿಷ್ಠರ ಗಮನಕ್ಕೆ ತಂದು ಸರಿಪಡಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ವಾಸ್ತವ ಸ್ಥಿತಿ ಮನವರಿಕೆ
ಸಂಪುಟ ವಿಸ್ತರಣೆ ನಂತರ ಉಂಟಾಗಿರುವ ಗೊಂದಲ ಮನವರಿಕೆ ಮಾಡಿಕೊಡುವ ಉದ್ದೇಶದಿಂದಲೇ ಮುಖ್ಯಮಂತ್ರಿ ಅವರು, ತಮ್ಮೊಂದಿಗೆ ಸುರ್ಜೇವಾಲ ಜೊತೆ ಹಿರಿಯ ಶಾಸಕರ ಮನೆಗಳಿಗೆ ತೆರಳಿ ವಾಸ್ತವ ಸ್ಥಿತಿ ಅರಿಯುವಂತೆ ಮಾಡಿದ್ದರು.
ಈ ಬೆಳವಣಿಗೆ ನಂತರವೇ ವರಿಷ್ಠರು ಶಿವಕುಮಾರ್ ಒಬ್ಬರಿಗೆ ಮಾತ್ರ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.


