ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿ ಪರಿಶೀಲನೆಯನ್ನು ಖುದ್ದಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಡೆಸಲಿದ್ದಾರೆ.
ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ದೆಹಲಿಯಲ್ಲಿ ಕೇಂದ್ರ ಸಚಿವರಿಗೆ ಮಾಡಿದ ಮನವಿಗೆ ತಕ್ಷಣ ಸ್ಪಂದಿಸಿದ ಚೌಹಾಣ್, ರಾಜ್ಯದ ಯಾವುದಾದರೊಂದು ಬರಪೀಡಿತ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಪರಿಶೀಲನೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿನ ಕೃಷಿ ಸಮಸ್ಯೆ ಹಾಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಆಗಸ್ಟ್ ಕೊನೆಯವರೆಗೆ ಅವಧಿ ವಿಸ್ತರಣೆ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.
ಕರ್ನಾಟಕವಲ್ಲದೆ, ಇಡೀ ರಾಷ್ಟ್ರದಲ್ಲಿ ಪ್ರಾರಂಭದಲ್ಲಿ ಮುಂಗಾರು ಕೊರತೆಯಾಗಿ ಬರ ಉಂಟಾಗಿದೆ. ನಮಗೆ ಎಲ್ಲಾ ಮಾಹಿತಿ ಬಂದಿದೆ, ಕರ್ನಾಟಕಕ್ಕೆ ಭೇಟಿ ಮಾತ್ರವಲ್ಲದೆ, ಮಳೆ ಅಭಾವದಿಂದ ಸೃಷ್ಟಿಯಾಗಿರುವ ಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಅವರು ತಿಳಿಸಿದ್ದಾರೆ.
ಈಗಾಗಲೇ ಕೃಷಿ ವಿಮಾ ಅವಧಿ ಮುಕ್ತಾಯ ಆಗುತ್ತಿರುವುದರಿಂದ ರೈತರು ತೀವ್ರ ತೊಂದರೆಗೆ ಸಿಲುಕಿರುವ ಹಿನ್ನೆಲೆಯಲ್ಲಿ 666 ಕೃಷಿ ವಿಮಾ ಘಟಕಗಳಲ್ಲಿ ಮಧ್ಯಂತರ ಪರಿಹಾರ ಕೊಡಲು ಆದೇಶ ನೀಡಲಾಗಿದೆ.
ಕೇಂದ್ರ ಪುರಸ್ಕೃತ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದೆ. ಜೊತೆಗೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಾಜ್ಯದ ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವರ ಭೇಟಿ ನಂತರ ನರೇಂದ್ರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದ ಕೃಷಿ ಚಟುವಟಿಕೆಗಳಿಗೆ ನೀರು ಬಿಡುವ ವಿಚಾರದಲ್ಲಿ ಯಾವುದನ್ನು ಮುಚ್ಚಿಡುವ ಅಗತ್ಯವಿಲ್ಲ. ಕೆಆರ್‌ಎಸ್ ಜಲಾಶಯದಲ್ಲಿ ಕೇವಲ 109 ಅಡಿ ನೀರಿದ್ದು, ಇದು ರಾಜ್ಯದ ರೈತರು ಒಂದು ಬೆಳೆ ಬೆಳೆಯುವುದಕ್ಕೆ ಸಾಲುವುದಿಲ್ಲ. ಇದರ ನಡುವೆ ಸುಪ್ರೀಂಕೋರ್ಟ್ , ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಎತ್ತಿ ಹಿಡಿದು ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸಿದೆ. ಈ ಸಮಸ್ಯೆಗೆ ಮಳೆಯೇ ಪರಿಹಾರ.
ಕೃಷಿ ಚಟುವಟಿಕೆಗಳಿಗೆ ನೀರು ಬಿಡುವುದು ಕಷ್ಟಕರವಾಗಿದೆ. ಲಭ್ಯತೆ ಆಧಾರದ ಮೇಲೆ ನೀರು ಬಿಡುವ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದರು.


