ಬೆಂಗಳೂರು:ಮಾಜಿ ಸಚಿವರಾದ ಬಿ.ನಾಗೇಂದ್ರ, ಗಾಲಿ ಜನಾರ್ದನ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಬಹಿರಂಗ ಪಡಿಸಿದ್ದಾರೆ.
ಆಡಳಿತ ಪಕ್ಷದ ಸದಸ್ಯರಷ್ಟೇ ಅಲ್ಲ, ಪ್ರತಿಪಕ್ಷ ನಾಯಕರ ಮೇಲಿರುವ ಆರೋಪಗಳಿಗೆ ಸಂಬಂಧಿಸಿದಂತೆಯೂ ವಿಚಾರಣೆಗೆ ಅನುಮತಿ ಕೋರಿದ್ದಾರೆ.
ಕಾನೂನಾತ್ಮಕವಾಗಿ ಪರಿಶೀಲಿಸಿಲ್ಲ
ಈ ಸಂಬಂಧ ಲೋಕಭವನದಿಂದ ಕಡತ ಬಂದಿದೆ, ಅದನ್ನು ಇನ್ನೂ ಕಾನೂನಾತ್ಮಕವಾಗಿ ಪರಿಶೀಲಿಸಿಲ್ಲ, ಸಾರಾಂಶ ಸರಿಯಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ, ಈ ಬಗ್ಗೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದರು.
ಸರ್ಕಾರದ ಮತ್ತೊಂದು ವಿಕೆಟ್ ಪತನವಾಗಲಿದೆ ಎಂಬುದಷ್ಟೇ ಅಲ್ಲ, ನನ್ನನ್ನೇ ಪತನ ಮಾಡುವುದಾಗಿ ಕೆಲವರು ಹೇಳಿದ್ದಾರೆ, ಅದರಲ್ಲಿ ಅವರು ಯಶಸ್ವಿಯಾಗಲಿ ಸಂತೋಷ, ತಪ್ಪು ಮಾಡಿದ್ದರೆ ಎಲ್ಲರೂ ಶಿಕ್ಷೆಗೆ ಒಳಗಾಗಬೇಕು, ಅದಕ್ಕೆ ನಾನು ಹೊರತಾಗಿಲ್ಲ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರತಿಪಕ್ಷ ನಾಯಕರು ಟೀಕೆ ಮಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ.
ನನಗೂ ಮಾತನಾಡಲು ಬರುತ್ತೆ
ಬಿಜೆಪಿ-ಜೆಡಿಎಸ್ ನಾಯಕರಂತೆ ನನಗೂ ಮಾತನಾಡಲು ಬರುತ್ತದೆ, ಆದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಅವರ ರೀತಿ ಮಾತನಾಡಲಾಗದು ಎಂದರು.
ಕನಿಷ್ಟ ನನಗಲ್ಲದಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಕೊಟ್ಟು, ಮನಸ್ಸಿಗೆ ಬಂದಂತೆ ನಾಲಿಗೆ ಹರಿಬಿಡುವುದನ್ನು ನಿಲ್ಲಿಸಲಿ.
ರಾಜಕೀಯದಲ್ಲಿ ಎಲ್ಲವೂ ಇರಬೇಕು, ಹಾಗೆಂದು ಸೌಜನ್ಯ ಮರೆಯುವುದು ಬೇಡ, ನೀವು ಟೀಕಿಸಿ, ಆರೋಪಿಸಿ, ಸಲಹೆ ನೀಡಿ, ಅದನ್ನು ಸ್ವೀಕರಿಸುತ್ತೇನೆ, ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ, ಆದರೆ, ಬಳಸಬಾರದ ಪದಗಳನ್ನು ಬಳಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ನಾಲಿಗೆ ಮೇಲೆ ಹತೋಟಿ
ನನಗೆ ಗೌರವ ಕೊಡದಿದ್ದರೂ ನಾಡಿನ ಜನತೆ ಹಾಗೂ ಪಕ್ಷ ಕೊಟ್ಟಿರುವ ಸ್ಥಾನಕ್ಕಾದರೂ ಬೆಲೆ ಕೊಡಿ, ನಿಮ್ಮ ನಾಲಿಗೆ ಮೇಲೆ ಹತೋಟಿ ಇರಲಿ ಎಂಬುದನ್ನು ನಮ್ರತೆಯಿಂದ ಹೇಳುತ್ತಿದ್ದೇನೆ.
ನಿಮ್ಮ ತಂದೆಯವರೂ ಇದೇ ಸ್ಥಾನ ಅಲಂಕರಿಸಿದ್ದರು ಎಂಬ ಪರಿವೆ ಇರಲಿ, ಬೇಡಿಕೆಗಳನ್ನು ಕೇಳಲಿ, ಅದರಲ್ಲಿ ತಪ್ಪಿಲ್ಲ, ಈ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಲು ಮಾತ್ರ ವಿಧೇಯಕ ಹಿಂಪಡೆಯಲಾಗಿದೆ ಎಂದರು.


